ಟಿವಿ ಮುಂದೆ ಲಕ್ಷ ಲಕ್ಷ ಜನರನ್ನು ಸೇರಿಸುವುದು ದೊಡ್ಡ ವಿಷಯವಲ್ಲ – ಜಾರಕಿಹೊಳಿ
ಗುಲ್ಬರ್ಗ, ಜುಲೈ 3: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಅವರ ಮಾತಿನ ಜಟಾಪಟಿ ಮುಂದುವರಿದಿದ್ದು, ಡಿಕೆಶಿ ಪದಗ್ರಹಣದ ಬಗ್ಗೆ ವ್ಯಂಗ್ಯ ಮಾಡಿರುವ ಸಚಿವ ಜಾರಕಿಹೊಳಿ ಟಿವಿ ಮುಂದೆ ಹತ್ತು ಲಕ್ಷ ಜನರನ್ನು ಸೇರಿಸುವುದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನಾ ಬ್ಯಾರೇಜ್ ಗೆ ಭೇಟಿ ನೀಡುವ ಸಮಯದಲ್ಲಿ ಮಾತನಾಡಿರುವ ಸಚಿವರು, ಡಿ.ಕೆ. ಶಿವಕುಮಾರ್ ಜನರ ಮುಂದೆ ಪದಗ್ರಹಣ ಮಾಡದೆ, ಟಿವಿ ಮುಂದೆ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ವ್ಯಂಗ್ಯ ಮಾಡಿದ ರಮೇಶ್ ಜಾರಕಿಹೊಳಿ, ಪದಗ್ರಹಣ ಸಮಾರಂಭದಲ್ಲಿ ಡಿಕೆಶಿ ಹತ್ತು ಲಕ್ಷ ಜನರನ್ನು ಸೇರಿಸಿ ತಮ್ಮ ತಾಕತ್ ಅನ್ನು ಪ್ರದರ್ಶಿಸಬೇಕಿತ್ತು, ಟಿವಿಯ ಮುಂದೆ ಲಕ್ಷ ಜನ ಸೇರಿದ್ದಾರೆ ಎಂದರೆ ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿಲ್ಲ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಶಕ್ತಿ ಏನೆಂದು ನನಗೆ ಗೊತ್ತಿದೆ ಅವರೊಂದು ಪಕ್ಷದ ರಾಜ್ಯಾಧ್ಯಕ್ಷರು ಅಷ್ಟೇ.. ನಾನು ಅವರ ಸ್ನೇಹಿತನಲ್ಲ ಎಂದು ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹೇಳಿದರು.
ಇತ್ತೀಚೆಗಷ್ಟೇ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಜಾರಕಿಹೊಳಿ ಅವರನ್ನು ಮೆಂಟಲ್ ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ರಮೇಶ್ ಜಾರಕಿಹೊಳಿ ಬಾಡಿ ಲಾಂಗ್ವೇಜ್ ನೋಡಿದರೆ ಯಾರು ಮೆಂಟಲ್ ಎನ್ನುವುದು ಗೊತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನ ಪ್ರಮುಖ ಏರಿಯಾ ಎಂದೇ ಕರೆಯಲ್ಪಡುವ ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮನೆಯೊಂದನ್ನು ಖರೀದಿಸಿದ್ದರು.








