ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವುದರ ಮೂಲಕ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಮಧ್ಯೆ ಚಿತ್ರ ತಂಡಕ್ಕೆ ಶಾಕ್ ಎದುರಾಗಿದೆ.
ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸನ್ನಿವೇಶ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ನಿರ್ಮಾಪಕರಿಗೆ, ನಟರಾದ ಅಮಿತಾಭ್ (Amitabh Bachchan), ಪ್ರಭಾಸ್ಗೆ (Prabhas) ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಲೀಗಲ್ ನೋಟಿಸ್ ನೀಡಿದ್ದಾರೆ.
ಈ ಚಿತ್ರ ಭಗವಾನ್ ಕಲ್ಕಿಯ ಪರಿಕಲ್ಪನೆ ಬದಲಾಯಿಸಿರುವಂತೆ ಇದೆ. ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದ ಮತ್ತು ವಿವರಿಸಿದ ಕಾರಣಗಳಿಗಾಗಿ, ಭಗವಾನ್ ಕಲ್ಕಿಯ ಕಥೆಯ ಚಿತ್ರಣವು ಸಂಪೂರ್ಣ ತಪ್ಪಾಗಿದೆ. ಹೀಗಾಗಿ ಈ ಚಿತ್ರ ಪವಿತ್ರ ಗ್ರಂಥಗಳಿಗೆ ಅವಮಾನ ಮಾಡುವಂತಿದೆ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿ ಚಿತ್ರತಂಡಕ್ಕೆ ಆಚಾರ್ಯ ಪ್ರಮೋದ್ ಕೃಷ್ಣಂ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಉಜ್ಜವಲ್ ಆನಂದ್ ಶರ್ಮಾ ನೋಟಿಸ್ ನೀಡಿದ್ದಾರೆ.
ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಕಲ್ಕಿ ಅವತಾರವು ವಿಷ್ಣುವಿನ ಕೊನೆಯ ಅವತಾರವಾಗಿದೆ. ಆದರೆ, ಕಲ್ಕಿ ಚಿತ್ರದಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಫೆಬ್ರವರಿ 19ರಂದು ಯುಪಿಯ ಸಂಭಾಲ್ನಲ್ಲಿ ಕಲ್ಕಿ ಧಾಮ್ ದೇವಾಲಯದ ಉದ್ಘಾಟಿಸಿದ್ದಾರೆ. ಅಲ್ಲಿ ಭಗವಾನ್ ಕಲ್ಕಿ ಜನಿಸಲಿದ್ದಾರೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ ಈ ಚಿತ್ರವು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಆದರೆ, ಇತ್ತ ಕಲ್ಕಿ 2898 ಎಡಿ ಚಿತ್ರ ಮಾತ್ರ ಭರ್ಜರಿ ಯಶಸ್ಸು ಕಾಣುತ್ತ ಸಾಗುತ್ತಿದೆ. ಅಮಿತಾಬ್, ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಹಲವು ನಟರು ಚಿತ್ರದಲ್ಲಿ ನಟಿಸಿದ್ದಾರೆ.








