ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ಎಂದೇ ಖ್ಯಾತರಾಗಿರುವ ದಿಗಂತ್ ಮಂಚಾಲೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಸತತ 20 ವರ್ಷಗಳ ಕಾಲ ತೆರೆಯ ಮೇಲೆ ಸಕ್ರಿಯರಾಗಿದ್ದ ದಿಗಂತ್ ಅವರಿಗೆ ಈಗಿನ ಪರಿಸ್ಥಿತಿ ಕಂಡು ಆತಂಕವಾಗಿದೆ. ಕನ್ನಡ ಚಿತ್ರರಂಗದಲ್ಲಿ ಎದುರಾಗಿರುವ ಗೆಲುವಿನ ಬರ ಮತ್ತು ಸಿನಿಮಾಗಳ ಕೊರತೆಯ ಬಗ್ಗೆ ದಿಗಂತ್ ಅವರು ಅತ್ಯಂತ ನೋವಿನಿಂದ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಇಲ್ಲದೆ ಮನೆಯಲ್ಲಿ ಕುಳಿತ ಅನುಭವ
ಇತ್ತೀಚೆಗಷ್ಟೇ ರುದ್ರ ನಾಗ ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದ ದಿಗಂತ್ ಮಾಧ್ಯಮಗಳ ಎದುರು ಸಿನಿಮಾ ರಂಗದ ಇಂದಿನ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಕಳೆದ 20 ವರ್ಷಗಳಲ್ಲಿ ಸೋಲು ಗೆಲುವು ಎರಡನ್ನೂ ನೋಡಿರುವ ದಿಗಂತ್ ಅವರಿಗೆ ಕೈ ತುಂಬಾ ಕೆಲಸ ಇರುತ್ತಿತ್ತು. ಆದರೆ ಮೊದಲ ಬಾರಿಗೆ ಸುಮಾರು ಆರು ತಿಂಗಳ ಕಾಲ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆರು ತಿಂಗಳ ಹಿಂದೆ ಒಪ್ಪಿಕೊಂಡಿದ್ದ ಎರಡು ಸಿನಿಮಾಗಳಿಂದ ನಿರ್ಮಾಪಕರು ಹಿಂದೆ ಸರಿದಿದ್ದಾರೆ. ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸರಿ ಇಲ್ಲ, ಈಗ ಸಿನಿಮಾ ಮಾಡುವುದು ಬೇಡ ಎಂದು ಅವರು ಕೈಬಿಟ್ಟಾಗ ದಿಗಂತ್ ಅವರಿಗೆ ಚಿತ್ರರಂಗದ ಗಂಭೀರತೆ ಅರಿವಾಗಿದೆ.
ಬೇರೆ ವೃತ್ತಿ ಹುಡುಕುವ ಯೋಚನೆ ಬಂದಿತ್ತು
ಸತತವಾಗಿ ಶೂಟಿಂಗ್‌ನಲ್ಲಿ ಬ್ಯುಸಿ ಇರುತ್ತಿದ್ದ ದಿಗಂತ್ ಅವರಿಗೆ ಕೆಲಸವಿಲ್ಲದ ಈ ದಿನಗಳು ತೀವ್ರ ಆತಂಕ ಮೂಡಿಸಿದ್ದವು. ಈ ಕಾರಣಕ್ಕೆ ಅವರು ಸಿನಿಮಾ ಬಿಟ್ಟು ಬೇರೆ ಯಾವುದಾದರೂ ಕೆಲಸಕ್ಕೆ ಸೇರಬೇಕಾ ಅಥವಾ ಹೊಸ ಕೋರ್ಸ್ ಮಾಡಬೇಕಾ ಎಂಬ ಗೊಂದಲಕ್ಕೆ ಬಿದ್ದಿದ್ದರು. ಅಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ಅವಕಾಶಗಳೇ ಸಿಗದಿದ್ದರೆ ಸ್ವಗ್ರಾಮ ತೀರ್ಥಹಳ್ಳಿಗೆ ಹೋಗಿ ಅಲ್ಲಿರುವ ತೋಟವನ್ನು ನೋಡಿಕೊಳ್ಳೋಣ ಎಂಬ ಯೋಚನೆಯೂ ಬಂದಿತ್ತು ಎನ್ನುವ ಮೂಲಕ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಬಾಡಿಗೆ ಹಣವೇ ಜೀವನಕ್ಕೆ ಆಸರೆ
ನಟ ದಿಗಂತ್ ಅವರಿಗೆ ನಂದಿ ಹಿಲ್ಸ್ ಬಳಿಯ ಗೇಟೆಡ್ ಕಮ್ಯುನಿಟಿಯಲ್ಲಿ ಒಂದು ಮನೆ ಇದೆ. ಸದ್ಯ ಆ ಮನೆಯಿಂದ ಬರುವ ಬಾಡಿಗೆಯನ್ನು ನೆಚ್ಚಿಕೊಂಡು ಜೀವನ ನಡೆಸುವಂತಾಗಿದೆ ಎಂದು ಅವರು ಹೇಳಿದ್ದಾರೆ. ಸ್ಟಾರ್ ನಟರೊಬ್ಬರು ತಮಗೆ ಬರುವ ಬಾಡಿಗೆ ಹಣವೇ ತಮಗೆ ಆಧಾರ ಎಂದು ಹೇಳಿರುವುದು ಕನ್ನಡ ಚಿತ್ರರಂಗದ ಇಂದಿನ ಆರ್ಥಿಕ ಮುಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಹೊಸ ನಿರ್ಮಾಪಕರು ಹಣ ಹೂಡಲು ಭಯಪಡುತ್ತಿರುವುದು ಮತ್ತು ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದಿಗಂತ್ ಅವರನ್ನು ಹೈರಾಣಾಗಿಸಿದೆ.
ಕನ್ನಡ ವರ್ಸಸ್ ತೆಲುಗು ಮತ್ತು ದುಬಾರಿ ಟಿಕೆಟ್ ದರ
ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಯನ್ನು ಪಕ್ಕದ ತೆಲುಗು ಉದ್ಯಮಕ್ಕೆ ಹೋಲಿಸಿರುವ ದಿಗಂತ್, ಅಲ್ಲಿ ಸಿನಿಮಾ ಸೆಟ್ಟೇರುತ್ತಿದ್ದಂತೆಯೇ ವ್ಯವಹಾರಗಳು ಮುಗಿದು ಹೋಗುತ್ತವೆ, ಎಲ್ಲರಿಗೂ ಕೆಲಸ ಸಿಗುತ್ತಿದೆ ಎಂದಿದ್ದಾರೆ. ಆದರೆ ಕನ್ನಡದಲ್ಲಿ ಅಂತಹ ವಾತಾವರಣವಿಲ್ಲ. ಇದರ ಜೊತೆಗೆ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹಾಗೂ ತಿಂಡಿ ತಿನಿಸುಗಳ ಬೆಲೆ ಗಗನಕ್ಕೇರಿದೆ. ಇಷ್ಟು ಹಣ ಕೊಟ್ಟು ಸಿನಿಮಾ ನೋಡಲು ಜನ ಸಾಮಾನ್ಯರು ಹಿಂಜರಿಯುತ್ತಿರುವುದು ಕೂಡ ಚಿತ್ರರಂಗದ ಕುಸಿತಕ್ಕೆ ಪ್ರಮುಖ ಕಾರಣ ಎಂದು ದಿಗಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ದಿಗಂತ್ ಅವರ ಈ ಮಾತುಗಳು ಇಡೀ ಕನ್ನಡ ಚಿತ್ರರಂಗ ಈಗ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿವೆ. ಮುಂಬರುವ ದಿನಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದು ಚಿತ್ರರಂಗ ಮತ್ತೆ ಹಳಿಗೆ ಮರಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.








