ಬೆಂಗಳೂರು : ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ತಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಕೊರೊನಾ ಸಂಕಷ್ಟದಲ್ಲಿ ಬಡ ಜನರ ನೆರವಿಗೆ ನಿಂತು ಕೈಲಾದ ಸಹಾಯ ಮಾಡಿದ್ದ ಸುದೀಪ್ ಇದೀಗ, ಮುಸ್ಲಿಂ ಯುವತಿಯ ಮದುವೆಗೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಆಟೋಚಾಲಕ ರಿಯಾಜ್ ಎಂಬುವವರು ಲಾಕ್ ಡೌನ್ ಗೂ ಮೊದಲೇ ತಂಗಿಯ ಮದುವೆ ನಿಗದಿಪಡಿಸಿದ್ದರು. ಆದರೆ, ಏಕಾಏಕಿ ಲಾಕ್ ಡೌನ್ ಆದ ಕಾರಣ, ಮದುವೆ ಖರ್ಚಿಗೆ ಹಣ ಹೊಂದಿಸುವುದು ರಿಯಾಜ್ ಗೆ ಕಷ್ಟವಾಗಿತ್ತು. ಎಲ್ಲಾ ಕಡೆ ನೆರವಿಗಾಗಿ ಸುತ್ತಿ ಸುಸ್ತಾಗಿದ್ದ ರಿಯಾಜ್, ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೊರೆ ಹೋಗಿದ್ದರು.
ರಿಯಾಜ್ ರ ಕಷ್ಟ ಕೇಳಿದ ಕಿಚ್ಚನ ಅಭಿಮಾನಿಗಳು ಸುದೀಪ್ ಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಮದುವೆ ಖರ್ಚನ್ನು ಭರಿಸಲು ತಮ್ಮ ಟ್ರಸ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದಾರೆ. ಇದೀಗ ರನ್ನನ ಸೂಚನೆಯ ಮೇರೆಗೆ ಟ್ರಸ್ಟ್ ಇಂದು ರಿಯಾಜ್ ಕುಟುಂಬಕ್ಕೆ ಹಣ ಹಸ್ತಾಂತರಿಸಿದೆ.