ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ.
ಕಾರ್ಗಿಲ್ ವಿಜಯ ದಿವಸ್ 25ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಲಡಾಖ್ ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಪ್ರದಾನಿ ಮೋದಿ ಅವರು ಶುಕ್ರವಾರ ಲಡಾಖ್ ನಲ್ಲಿನ ಡ್ರಾಸ್ ಗೆ ತೆರಳಿದ್ದರು. ಪ್ರಧಾನಿ ಭೇಟಿಗೆ ಮುನ್ನ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಭದ್ರತಾ ಉದ್ದೇಶಗಳಿಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಯಕರು ಸಹ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಗಿಲ್ ಯುದ್ಧ ನಡೆದು ಇಂದಿಗೆ 25 ವರ್ಷ ಕಳೆದಿವೆ. 1999 ರ ಜುಲೈ 26 ರಂದು ಅಧಿಕೃತವಾಗಿ ಕೊನೆಗೊಂಡಿತ್ತು. ಹೀಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಲಡಾಖ್ ನ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಈ ದಿನ ಸ್ಮರಿಸಲಾಗುತ್ತದೆ. ದೇಶಕ್ಕಾಗಿ ಯೋಧರ ಬಲಿದಾನ ನೆನಪಿಸಿಕೊಳ್ಳಲಾಗುತ್ತದೆ.








