ನವದೆಹಲಿ: ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯ ವೇಳೆ ನಡೆದ ವಿಲಕ್ಷಣ ಘಟನೆಯೊಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪಕ್ಷದ ಅಧಿಕೃತ ವಕ್ತಾರ ವಿಜೇತಾ ದಹಿಯಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಬದಲು ಹೋಟೆಲ್ ಒಂದರಲ್ಲಿ ಆರಾಮವಾಗಿ ಬರ್ಗರ್ ತಿನ್ನುತ್ತಾ ಕುಳಿತಿದ್ದ ವಿಡಿಯೋ ವೈರಲ್ ಆಗಿದ್ದು, ಪಕ್ಷವು ಅವರನ್ನು ಉಚ್ಚಾಟಿಸಿದೆ.
ಲಾಠಿಚಾರ್ಜ್ ನಡುವೆ ಬರ್ಗರ್ ಪಾರ್ಟಿ
ನೀಟ್ ಹಗರಣ ಖಂಡಿಸಿ ದೆಹಲಿಯಲ್ಲಿ ನಿನ್ನೆ ನಡೆದ ಹೋರಾಟದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾಗ, ವಿದ್ಯಾರ್ಥಿಗಳು ನೋವಿನಿಂದ ಕಿರುಚಾಡುತ್ತಿದ್ದರೆ, ಇತ್ತ ಪಕ್ಷದ ವಕ್ತಾರ ವಿಜೇತಾ ದಹಿಯಾ ಹತ್ತಿರದ ಹೋಟೆಲ್ ಒಂದರಲ್ಲಿ ಕುಳಿತು ಬರ್ಗರ್ ಸವಿಯುತ್ತಿದ್ದರು. ಈ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಕ್ಷಮಿಸಲಾಗದ ಅಪರಾಧ ಎಂದ ಪಕ್ಷದ ವರಿಷ್ಠರು
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಕ್ರೋಚ್ ಜನತಾ ಪಾರ್ಟಿ, ತನ್ನ ಎಕ್ಸ್ ಖಾತೆಯ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಮ್ಮ ಪಕ್ಷವನ್ನು ಮತ್ತು ಸಿದ್ಧಾಂತವನ್ನು ನಂಬಿ ಬಂದ ವಿದ್ಯಾರ್ಥಿಗಳು ಬೀದಿಗಿಳಿದು ಪೊಲೀಸರ ಲಾಠಿ ಏಟು ತಿನ್ನುತ್ತಿರುವಾಗ, ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕ್ತಾರರು ಈ ರೀತಿ ಬೇಜವಾಬ್ದಾರಿತನ ತೋರಿರುವುದು ಅಕ್ಷಮ್ಯ. ವಿಜೇತಾ ದಹಿಯಾ ಅವರ ಈ ವರ್ತನೆಯನ್ನು ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹೀಗಾಗಿ ಅವರನ್ನು ತಕ್ಷಣದಿಂದಲೇ ಪಕ್ಷದ ವಕ್ತಾರ ಸ್ಥಾನದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದೆ.
ಉದ್ಧಟತನದ ಉತ್ತರ ನೀಡಿದ ವಿಜೇತಾ ದಹಿಯಾ
ಪಕ್ಷದ ಕ್ರಮ ಮತ್ತು ಜನರ ಪ್ರಶ್ನೆಗಳಿಗೆ ವಿಜೇತಾ ದಹಿಯಾ ಅವರು ಅತ್ಯಂತ ಮೊಂಡಾಟದ ಉತ್ತರ ನೀಡಿದ್ದಾರೆ. ಈ ಪ್ರತಿಭಟನೆಗೆ ನಾನು ಜವಾಬ್ದಾರನಲ್ಲ, ನನ್ನನ್ನು ಪ್ರಶ್ನಿಸುವ ಬದಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿ ಎಂದು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ, ನೀವು ನನಗೆ ಮತ ನೀಡಿ ಆರಿಸಿ ತಂದಿಲ್ಲ, ಆದ್ದರಿಂದ ನಾನು ಯಾರಿಗೂ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ಉದ್ಧಟತನವನ್ನು ಮೆರೆದಿದ್ದಾರೆ. ಇವರ ಈ ಹೇಳಿಕೆಗಳು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿವೆ.
ಪ್ರತಿಭಟನೆಯ ತೀವ್ರತೆಯನ್ನು ಕಡಿಮೆ ಮಾಡಲು ಇಂತಹ ಘಟನೆಗಳು ಕಾರಣವಾಗುತ್ತವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಹೋರಾಟದ ನಡುವೆ ವಕ್ತಾರರ ಬರ್ಗರ್ ಪಾರ್ಟಿ ಈಗ ಇಡೀ ಪಕ್ಷಕ್ಕೆ ಮುಜುಗರ ತಂದಿಟ್ಟಿದೆ.








