ಕಾಲೇಜು ಹಾಗೂ ಪ್ರೌಢಶಾಲೆ ತೆರೆದ ಬಳಿಕ ಪ್ರಾಥಮಿಕ ಶಾಲೆ ತೆರೆಯಲಾಗುವುದು – ಸುರೇಶ್ ಕುಮಾರ್
ತುಮಕೂರು,ಜುಲೈ 4: ಶಾಲಾ ಕಾಲೇಜುಗಳು ತೆರೆಯುವ ದಿನಾಂಕದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವಾಗಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ತುಮಕೂರಿನ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ಯಾವಾಗ ತೆರೆಯಲಾಗುತ್ತದೆ ಎಂಬ ಪ್ರಶ್ನೆ ಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಮೊದಲು ಕಾಲೇಜು ಹಾಗೂ ಪ್ರೌಢಶಾಲೆ ಆ ನಂತರ ಅಂದರೆ, ಕೊನೆಗೆ ಪ್ರಾಥಮಿಕ ಶಾಲೆ ಓಪನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಸದ್ಯಕ್ಕೆ ಶಾಲೆ ತೆರೆಯುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದು ತುಂಬ ದೂರದ ಮಾತಾಗಿದ್ದು, ಕೊರೊನಾ ಒಂದು ಹಂತದ ನಿಯಂತ್ರಣಕ್ಕೆ ಬಂದ ಬಳಿಕ ಮೊದಲು ಕಾಲೇಜು ಹಾಗೂ ಪ್ರೌಢ ಶಾಲೆಗಳನ್ನು ತೆರೆಯುವ ಚಿಂತನೆ ಇದ್ದು, ಸಣ್ಣ ಮಕ್ಕಳಿಗೆ ಕೊರೊನಾ ಬೇಗನೇ ಹರಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಕಾಲೇಜು ಹಾಗೂ ಪ್ರೌಢ ಶಾಲೆಗಳ ತೆರೆದ ನಂತರ ಕೊನೆಗೆ ತೆರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಅಗಸ್ಟ್ ತಿಂಗಳ ಬಳಿಕವಷ್ಟೇ ಶಾಲಾ ಕಾಲೇಜು ತೆರೆಯುವ ಬಗ್ಗೆ ಇನ್ನೊಂದು ಸುತ್ತಿನ ಚರ್ಚೆ ಆರಂಭಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.