ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿಗೆ ಕೊರೊನಾ ಸೋಂಕು
ಕೊಲ್ಕತ್ತಾ, ಜುಲೈ 4: ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಲಾಕೆಟ್ ಚಟರ್ಜಿ ಅವರು ತನಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ.
‘ನಾನು ಲಘು ಜ್ವರದಿಂದ ಬಳಲುತ್ತಿದ್ದೆ ಮತ್ತು ಕಳೆದ ಒಂದು ವಾರದಿಂದ ಸ್ವಯಂ-ಪ್ರತ್ಯೇಕತೆಯಲ್ಲಿದ್ದೇನೆ. ಇಂದು ಕೊರೊನಾ ಸೋಂಕು ಪರೀಕ್ಷೆಗೆ ಒಳಪಟ್ಟಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರತಿ ಮಾಹಿತಿಯನ್ನು ಪೋಸ್ಟ್ ಮಾಡುತ್ತೇನೆ ಮತ್ತು ನಾನು ಚೆನ್ನಾಗಿ ಇದ್ದೇನೆ ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಲಾಕೆಟ್ ಚಟರ್ಜಿ, ವಿಶೇಷವಾಗಿ ಮಹಿಳೆಯರ ಸಮಸ್ಯೆಗಳ ಬಗ್ಗೆ ತಳಮಟ್ಟದ ಆಂದೋಲನದಿಂದ ಬಹಳ ಸಕ್ರಿಯರಾಗಿದ್ದಾರೆ.

ಜೂನ್ 19 ರಂದು ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ಹುತಾತ್ಮ ಸೇನಾ ಜವಾನ್ ರಾಜೇಶ್ ಒರಂಗ್ ಅವರ ಅಂತ್ಯಕ್ರಿಯೆಯಲ್ಲಿ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರೊಂದಿಗೆ ಲಾಕೆಟ್ ಚಟರ್ಜಿ ಹಾಜರಿದ್ದು, ಹುತಾತ್ಮರಾದ ಸೈನಿಕನಿಗೆ ಗೌರವ ಸಲ್ಲಿಸಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಕಳೆದ ಹದಿನೈದು ದಿನಗಳ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು ಈ ಸಂದರ್ಭದಲ್ಲಿ ಲಾಕೆಟ್ ಚಟರ್ಜಿ ಅವರಿಗೆ ಕೊರೊನಾ ಸೋಂಕು ತಗಲಿರಬಹುದು ಎಂದು ಹೇಳಲಾಗಿದೆ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ನಟಿಯೂ ಆಗಿರುವ ಲಾಕೆಟ್ ಚಟರ್ಜಿ ಮನೆಯಲ್ಲಿಯೇ ಐಸೋಲೇಶನ್ ಗೆ ಒಳಗಾಗಿದ್ದರು. ಇಂದು ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.








