ಕೇರಳದ ವಯನಾಡು (Wayanad Landslides) ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರಗುತ್ತಿದೆ. ಸದ್ಯ ಅಲ್ಲಿ ಉಂಟಾದ ಭೂ ಕುಸಿತಕ್ಕೆ ಬಲಿಯಾದವರ ಸಂಖ್ಯೆ 300ರ ಗಡಿ ದಾಟಿದೆ. ಸಾವಿರಾರು ಜನರು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ದುರಂತದಲ್ಲಿ ಮನೆ, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಸೆಲೆಬ್ರಿಟಿಗಳು ಈಗ ಅವರ ಸಹಾಯಕ್ಕೆ ಮುಂದೆ ಬರುತ್ತಿದ್ದಾರೆ.
ವಯನಾಡು ಭೂಕುಸಿತ ದುರಂತದಲ್ಲಿ ಸಂಕಷ್ಟದಲ್ಲಿರುವರಿಗೆ ನೆರವಾಗಲು ಲಕ್ಷ ಲಕ್ಷ ಹಣವನ್ನು ಕೇರಳದ ಸಿಎಂ ಫಂಡ್ ಗೆ ನಟ, ನಟಿಯರು ದೇಣಿಗೆ ನೀಡಿದ್ದಾರೆ. ಕನ್ನಡದ ರಶ್ಮಿಕಾ ಮಂದಣ್ಣ, ತಮಿಳು ನಟ ಸೂರ್ಯ, ಚಿಯಾನ್ ವಿಕ್ರಮ್, ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಹಲವರು ಜನರ ನೋವಿಗೆ ಧ್ವನಿಯಾಗಿದ್ದಾರೆ.
ಕೇರಳದಲ್ಲಿ ಉಂಟಾಗಿರುವ ಭೂಕುಸಿತ ದುರಂತ ಕಂಡು ಅಲ್ಲಿನ ಸಿಎಂ ಫಂಡ್‌ಗೆ ನಟಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyan Vikram), ಕೇರಳದ ಸಿಎಂ ಫಂಡ್‌ಗೆ 20 ಲಕ್ಷ ರೂ. ದೇಣಿಗೆ ನೀಡುವ ಮೂಲಕ ನೆರವಾಗಿದ್ದಾರೆ. ಸೂರ್ಯ (Suriya) ಮತ್ತು ಜ್ಯೋತಿಕಾ ದಂಪತಿ, ನಟ ಕಾರ್ತಿ (Karthi) ಜಂಟಿಯಾಗಿ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಸ್ಟಾರ್ ನಟ ಮಮ್ಮುಟ್ಟಿ ಮತ್ತು ಪುತ್ರ ದುಲ್ಕರ್ ಸಲ್ಮಾನ್ ಜೊತೆಯಾಗಿ 35 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಅಲ್ಲದೇ, ಫಹಾದ್ ಫಾಸಿಲ್, ನಜ್ರಿಯಾ ಜೋಡಿ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೇ, ಇನ್ನೂ ಹಲವಾರು ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ದೇಣಿಗೆಯ ಮನಸ್ಸು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.