ವಿಜಯಪುರ: ಸರ್ಕಾರಕ್ಕೆ ತಾಕತ್ತಿದ್ದರೆ ಬಿ.ವೈ. ವಿಜಯೇಂದ್ರನ ಭ್ರಷ್ಟಾಚಾರವನ್ನು ಹೊರಗೆ ತರಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಕೊರೊನಾ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಹೊರಗೆ ಬರಲಿ. ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ಇಲ್ಲ. ಡಿಕೆಶಿ-ವಿಜಯೇಂದ್ರ ಮಧ್ಯೆ ನಡೆಯುತ್ತಿರುವ ಹೊಂದಾಣಿಕೆ ಇದು. ಇದು ಶೇ. 100ರಷ್ಟು ನಿಜ ಎಂದು ಹೇಳಿದ್ದಾರೆ.
ಭೋವಿ, ತಾಂಡಾ ನಿಗಮಗಳ ತನಿಖೆ ಆಗಲಿ. ಭ್ರಷ್ಟ ಕುಟುಂಬವನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಡಿ. ಸಿದ್ದರಾಮಯ್ಯ, ಡಿಕೆಶಿಗೆ ಧಮ್, ತಾಕತ್ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತಂದು ರಾಜ್ಯದ ಮುಂದಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ಹಾಗೂ ಡಿಕೆಶಿ ಇಬ್ಬರೂ ಭ್ರಷ್ಟರು. ಇಬ್ಬರು ಸೇರಿಯೇ ಬಿಜಿನೆಸ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಮೇಲೆ ಗಂಭೀರ ಆರೋಪಗಳಿವೆ. ಅವರು ವೇದಿಕೆಗೆ ಬರಲೇಬಾರದು. ವಾಲ್ಮೀಕಿಯಲ್ಲಿ ಡಿಕೆಶಿ ಇದ್ದಾರೆ. ರಾಹುಲ್ ಗಾಂಧಿ ಡೈರೆಕ್ಷನ್ ಇದೆ. ಯಡಿಯೂರಪ್ಪ ಶಿಷ್ಯ ರಾಜು ಪ್ರಕರಣದಲ್ಲಿದ್ದಾನೆ. ಇವುಗಳನ್ನೆಲ್ಲ ಬಿಟ್ಟು ಮೈಸೂರು ಹಗರಣಕ್ಕೆ ಬೆನ್ನು ಹತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಮಾತ್ರ ರಾಜೀನಾಮೆ ನೀಡಿದರೆ ಸಾಲದು. ಸಿಎಂ ರಾಜೀನಾಮೆ ಕೊಟ್ಟರೆ, ಡಿಕೆಶಿಗೆ ಸಿಎಂ ಆಗಲು ಅನುಕೂಲವಾಗುತ್ತದೆ. ಹಾಗಾಗಿ ಇಡೀ ಸರ್ಕಾರವೇ ಅಧಿಕಾರದಿಂದ ಹಿಂದೆ ಸರಿದು ರಾಜೀನಾಮೆ ನೀಡಬೇಕು. ಮತ್ತೆ ಚುನಾವಣೆಗೆ ಹೋಗೋಣ ಎಂದು ಹೇಳಿದ್ದಾರೆ.








