ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಸೈಟು ವಿಚಾರದಲ್ಲಿ ಅಪ್ಪ-ಅಮ್ಮ ಬೇಸರಗೊಂಡಿದ್ದಾರೆ. ಆದರೂ ನಾವು ಹೆದರಿ ಕೂಡುವುದಿಲ್ಲ. ಬಿಜೆಪಿ ಕುತಂತ್ರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯ 40 ವರ್ಷದ ರಾಜಕೀಯ ಜೀವನದಲ್ಲಿ ಯಾವತ್ತೂ ಈ ರೀತಿ ಕಳಂಕ ಬಂದಿಲ್ಲ. ಬರುವುದೂ ಇಲ್ಲ. ಯಾಕೆಂದರೆ ಅವರ ತುಂಬಾ ಪ್ರಾಮಾಣಿಕರು. ವಿನಾಃಕಾರಣ ಅವರ ಹೆಸರು ಕೆಡಿಸಲು ಸುಳ್ಳು ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಬರೀ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಾದೇಶ ಪಡೆದು ಆಯ್ಕೆಯಾದ ಸರ್ಕಾರಗಳನ್ನ ಕೆಡವಲು ವಾಮಮಾರ್ಗ ಅನುಸರಿಸುತ್ತಿದೆ. ರಾಜ್ಯಪಾಲರನ್ನು ಬಳಸಿಕೊಂಡು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಈ ರೀತಿ ಕಾರ್ಯ ಮಾಡುತ್ತಿದೆ. ರಾಜಕೀಯ ವಿರೋಧಿಗಳನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಯಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವ ಕೊಲೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.