ಆನೇಕಲ್: ವರಮಹಾಲಕ್ಷ್ಮೀ (Varamahalakshmi Festival) ಹಬ್ಬದ ಹಿನ್ನೆಲೆಯಲ್ಲಿ ಚೀಟಿ ಹೆಸರಿನಲ್ಲಿ ಐದು ಕೋಟಿ ರೂ. ಗೂ ಅಧಿಕ ಹಣ ವಂಚಿಸಿ (Fraud) ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.
ಆನೇಕಲ್ (Anekal) ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಿನ್ನ ಕೊಡುತ್ತೇನೆ ಎಂದು ಹಣ ಕಟ್ಟಿಸಿಕೊಂಡು ಸೇಟು ಒಬ್ಬಾತ ವಂಚಿಸಿದ್ದಾನೆ. ಲಕ್ಷಾಂತರ ರೂ. ಸಾಲ ಶೂಲ ಮಾಡಿ ಮಹಿಳೆಯರು (Woman) ಹಣ ಕಟ್ಟಿದ್ದರು. ಆದರೆ, ಚಿನ್ನ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಪರಾರಿಯಾಗಿದ್ದಾನೆ. ಮುನಾರಾಮ್ ಎಂಬ ರಾಜಸ್ಥಾನಿ ಮೂಲದ ಮಾರ್ವಾಡಿ ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್ ನ ಮಾಲೀಕನಾಗಿದ್ದು, ಹತ್ತು ವರ್ಷಕ್ಕೂ ಹೆಚ್ಚು ಕಾಲ ಆತ ಇಲ್ಲೇ ವಾಸಿಸುತ್ತಿದ್ದ. 150ಕ್ಕೂ ಅಧಿಕ ಜನರಿಂದ ಚೀಟಿ ಹಾಕಿಸಿಕೊಂಡು ಚಿನ್ನ ಅಡಮಾನ ಇಟ್ಟುಕೊಂಡಿದ್ದ. ಹಬ್ಬ ಎಂದು ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ತೆರಳಿದ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ.
ಇದರಿಂದ ಆತಂಕಕ್ಕೊಳಗಾದ ಗ್ರಾಮಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೇಟು ಇಂದ ವಂಚನೆಗೊಳಗಾದವರು ಸೂರ್ಯ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ. ಘಟನೆ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.