ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಮೇಲೆ ಸಿಐಡಿ (CID) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ ನಲ್ಲಿರುವ ಭೋವಿ ನಿಗಮದ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ, ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ ಆರೋಪದ ಮೇಲೆ ದಾಳಿ ಮಾಡಿರುವ ಸಿಐಡಿ ಅಧಿಕಾರಿಗಳು ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ನಡೆದಿದ್ದ ಅವ್ಯವಹಾರ ಆರೋಪದ ಮೇಲೆ ದೂರು ದಾಖಲಾಗಿತ್ತು.
10 ಕೋಟಿ ರೂ. ಗೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸರ್ಕಾರ ಇತ್ತೀಚಿಗೆ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ನೀಡಿತ್ತು. ಹೀಗಾಗಿ ಅಧಿಕಾರಿಗಳು, ಅಧೀಕ್ಷಕ ಸುಬ್ಬಪ್ಪರನ್ನು ಬಂಧಿಸಿ ತನಿಖೆ ನಡೆಸಿತ್ತು. ಈಗ ಕಚೇರಿ ಮೇಲೆ ದಾಳಿ ನಡೆಸಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.