ಮುಂಬೈ: ನಟಿ ನತಾಶಾ (Natasa) ರೊಂದಿಗೆ ಡಿವೋರ್ಸ್ (Divorce) ಪಡೆದ ನಂತರ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ.
ನತಾಶಾಗೆ ಗುಡ್ ಬೈ ಹೇಳಿದ ನಂತರ ಈಗ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಂಡ್ಯ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಇದು ಭಾರೀ ಸದ್ದು ಮಾಡಿತ್ತು. ಆದರೆ, ಈಗ ಪಾಂಡ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ಗ್ರೀಸ್ ನಲ್ಲಿ ವಿಹಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಜಾಸ್ಮಿನ್ ಇಂಗ್ಲೆಂಡ್ ನ ಎಸೆಕ್ಸ್ನಲ್ಲಿ ಜನಿಸಿದರೂ ಇವರ ಪೋಷಕರು ಮಾತ್ರ ಭಾರತೀಯ ಮೂಲದವರು. ಜಾಸ್ಮಿನ್ ಗಾಯಕಿ ಆಗುವುದಕ್ಕೂ ಮುನ್ನ ʻದಿ ಓನ್ಲಿ ವೇ ಈಸ್ ಎಸೆಕ್ಸ್ʼ ಎಂಬ ಬ್ರಿಟಿಷ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ 2010ರ ವೇಳೆಗೆ ಜನಪ್ರಿಯತೆ ಗಳಿಸಿದ್ದರು. 2012ರ ವೇಳೆಗೆ ಈ ಶೋನಲ್ಲಿ ಪೂರ್ಣಪಾತ್ರಧಾರಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಜಾಸ್ಮಿನ್ 2014ರಲ್ಲಿ ಯೂಟ್ಯೂಬ್ ಚಾನೆಲ್ ವೊಂದನ್ನು ಆರಂಭಿಸಿದ್ದರು. ತಮ್ಮದೇ ಹಾಡುಗಳನ್ನು ರೆಕಾರ್ಡಿಂಗ್ ಮಾಡಿ ಗಾಯನ ಪ್ರದರ್ಶನಗಳನ್ನು ನೀಡಲು ಆರಂಭಿಸಿದರು. ಝಾಕ್ ನೈಟ್, ಇಂಟೆನ್ಸ್-ಟಿ ಮತ್ತು ಆಲ್ಲಿ ಗ್ರೀನ್ ಮ್ಯೂಸಿಕ್ನಂತಹ ಕಲಾವಿದರೊಂದಿಗೆ ಹಾಡಿ ಜನಮನ್ನಣೆ ಗಳಿಸಿದ್ದರು.
ಸದ್ಯ ಇನ್ಸ್ಟಾಗ್ರಾಮ್ನಲ್ಲಿ 6.48 ಲಕ್ಷ ಫಾಲೋವರ್ಸ್ಗಳನ್ನು ಹೊಂದಿರುವ ಜಾಸ್ಮಿನ್, 5.7 ಲಕ್ಷ ಯುಟ್ಯೂಬ್ ಸಬ್ಸ್ಕ್ರೈಬರ್ಸ್ಗಳನ್ನು ಹೊಂದಿದ್ದಾರೆ. ಅವರು ಬಿಕಿನಿ ಫ್ಯಾಷನ್ಗೆ ಹೆಸರು ವಾಸಿಯಾಗಿದ್ದಾರೆ. ಆದರೆ, ರಿಲೇಶನ್ ಶಿಪ್ ಬಗ್ಗೆ ಮಾತ್ರ ಪಾಂಡ್ಯಾ ಹಾಗೂ ಗಾಯಕಿ ಎಲ್ಲಿಯೂ ಹೇಳಿಕೆ ನೀಡಿಲ್ಲ.








