ನವದೆಹಲಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್ (Vinesh Phogat) ಭಾರತಕ್ಕೆ ಬಂದಿದ್ದು, ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ಫೋಗಟ್ ರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಇದನ್ನು ಕಂಡು ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ನಂತರ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು.
ವಿನೇಶ್ ಫೋಗಟ್ ಬೆಂಬಲಕ್ಕೆ ಭಾರತದ ಕುಸ್ತಿ ಫೆಡರೇಷನ್ ನಿಲ್ಲಲಿಲ್ಲ ಎಂದು ಫೋಗಟ್ ಪತಿ ಸೋಮ್ವೀರ್ ಅಸಮಾಧಾನ ಹೊರಹಾಕಿದ್ದಾರೆ. ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿತ್ತು. ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್ ಅನರ್ಹರಾಗಿದ್ದರು.
ಕ್ರೀಡೆಯ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್ ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು. ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಬೇಕೆಂದು ಮನವಿ ಮಾಡಿದ್ದರು. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ ಬೆಳ್ಳಿಯಿಲ್ಲದೆ ಮನೆಗೆ ಬಂದಿದ್ದರು.








