ಕೊಪ್ಪಳ: ಜಲಾಶಯದಲ್ಲಿ (Tungabhadra Dam) ತುಂಡಾಗಿದ್ದ 19ನೇ ಗೇಟ್ ನ ಎಲ್ಲ 5 ಸ್ಟಾಪ್ ಲಾಗ್ (Stop Log Gate) ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.
ಡ್ಯಾಂ ತಜ್ಞರಾಗಿರುವ ಕನ್ನಯ್ಯ ನಾಯ್ಡು ಹಾಗೂ ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆ ನಡೆಸಿತ್ತು. ಅ. 16ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಈಗ ಶನಿವಾರ ಸಂಜೆ ಎಲ್ಲಾ ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಬಂದ್ ಆಗಿದೆ. ಜಲಾಶಲಯದ ಎಲ್ಲ 33 ಗೇಟ್‍ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ಹೇಳಿದೆ.
ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವಂತಾಗಲಿದೆ.
ಈಗ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಮಾತನಾಡಿ, ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿವಯಸ್ಸಿನಲ್ಲಿಯೂ ಹೈದರಾಬಾದ್ ನಿಂದ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಯತ್ನಿಸಿದೆ. ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ಸಹಕರಿಸಿದೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಕನ್ನಯ್ಯ ಅವರ ಕಾರ್ಯಕ್ಕೆ ಇಡೀ ರಾಜ್ಯವೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದೆ.








