ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೀಡಿದೆ.
ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ 25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಈ ಯೋಜನೆ 23 ಲಕ್ಷ ಕೇಂದ್ರ ನೌಕರರಿಗೆ ಲಾಭವಾಗಲಿದೆ. ಮುಂದಿನ ವರ್ಷ ಏಪ್ರಿಲ್ 1ರಂದು ಈ ಯೋಜನೆ ಜಾರಿಗೆ ಬರಲಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾತನಾಡಿದ್ದು, ವಿಪಕ್ಷಗಳು ಈ ಯೋಜನೆಗೆ ಅಡ್ಡಿ ಮಾಡುತ್ತಿವೆ. ಆದರೆ, ಉದ್ಯೋಗಿಗಳ ಬಗ್ಗೆ ನಾವು ಗಂಭೀರವಾಗಿದ್ದೇವೆ. ಹೀಗಾಗಿ, ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. 25 ವರ್ಷ ಕೆಲಸ ಮಾಡಿದ ಪ್ರತಿಯೊಬ್ಬ ನೌಕರನಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಹೇಳಿದ್ದಾರೆ.
10 ವರ್ಷ ಸೇವೆ ಸಲ್ಲಿಸಿದವರಿಗೆ 10 ಸಾವಿರ ಪಿಂಚಣಿ ಸಿಗಲಿದೆ. ನೌಕರರು ಸೇವೆಯಲ್ಲಿರುವಾಗಲೇ ಸಾವನ್ನಪ್ಪಿದರೆ, ಅವರ ಪತ್ನಿಯರಿಗೆ ಶೇ.60ರಷ್ಟು ಪಿಂಚಣಿ ನೀಡಲಾಗುವುದು. ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರವೂ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ.
ಒಬ್ಬ ಉದ್ಯೋಗಿ ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ವೇತನದ ಕನಿಷ್ಠ ಶೇ. 50ರಷ್ಟನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಕೇಂದ್ರ ಹೇಳಿದೆ.
ಪಿಂಚಣಿದಾರನು ಮರಣ ಹೊಂದಿದರೆ, ಅವನ ಕುಟುಂಬವು ಮರಣದ ಸಮಯದಲ್ಲಿ ಪಡೆದ ಪಿಂಚಣಿಯ ಶೇ. 60ರಷ್ಟನ್ನು ಪಡೆಯುತ್ತಾನೆ.