ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ (Chikkanna) ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಾಮಿಡಿ ನಟ ಚಿಕ್ಕಣ್ಣ ಗುರುವಾರ ಬಸವೇಶ್ವರ ನಗರದಲ್ಲಿನ ಎಸಿಪಿ ಕಚೇರಿಗೆ ತೆರಳಿ ಮತ್ತೊಮ್ಮೆ ವಿಚಾರಣೆ ಎದುರಿಸಿದ್ದಾರೆ. ಆರೋಪಿ ದರ್ಶನ್ (Actor Darshan) ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಕ್ಕೆ ಮತ್ತೆ ವಿಚಾರಣೆಗೆ ಕರೆದಿದ್ದರು ಎಂದು ಚಿಕ್ಕಣ್ಣ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಒಬ್ಬ ಸಾಕ್ಷಿದಾರನಾಗಿದ್ದುಕೊಂಡು ಹೋಗಿ ದರ್ಶನ್ ರನ್ನು ಮಾತನಾಡಿಸಬಾರದು ಅನ್ನೋದು ನನಗೆ ಗೋತ್ತಿರಲಿಲ್ಲ. ಹೀಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದೇನೆ. ವಿಚಾರಣೆಯ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೀನಿ. ಮತ್ತೆ ಅವರು ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಆಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಹೋಗಿದ್ದಾರೆ. ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ, ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 9ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.