ಬೆಂಗಳೂರು:ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಂಗಳವಾರ ಮಧ್ಯಾಹ್ನ ಹೈಡ್ರಾಮಾ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಮ್ಮ ಜಮೀನಿನಲ್ಲಿದ್ದ ಬೆಲೆಬಾಳುವ ಮರಗಳನ್ನು ತೆರವುಗೊಳಿಸಿದ ಸರ್ಕಾರ, ಅದಕ್ಕೆ ಪರಿಹಾರ ನೀಡಲು ಸತಾಯಿಸುತ್ತಿದೆ ಎಂದು ಆರೋಪಿಸಿ ರೈತರೊಬ್ಬರು ವಿಧಾನಸೌಧದ ಆವರಣದಲ್ಲಿದ್ದ ಸರ್ಕಾರಿ ಶ್ರೀಗಂಧದ ಮರವನ್ನೇ ಕತ್ತರಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್.ವಿಶುಕುಮಾರ್ ಈ ಕೃತ್ಯ ಎಸಗಿದ ರೈತ ನಾಯಕರಾಗಿದ್ದು, ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರದ ಸಮೀಪ ಆಗಮಿಸಿದ ವಿಶುಕುಮಾರ್, ಅಲ್ಲಿ ಬೆಳೆದಿದ್ದ ಶ್ರೀಗಂಧದ ಮರದ ಕೊಂಬೆಯೊಂದನ್ನು ಏಕಾಏಕಿ ಕತ್ತರಿಸಿದ್ದಾರೆ. ಬಿಗಿ ಭದ್ರತೆಯಿರುವ ವಿಧಾನಸೌಧದ ಆವರಣದಲ್ಲೇ ಮರ ಕತ್ತರಿಸುವುದನ್ನು ಕಂಡ ಪೊಲೀಸರು ಕ್ಷಣಕಾಲ ಅವಕ್ಕಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ವಿಶುಕುಮಾರ್ ಅವರನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಸರ್ಕಾರಿ ಆಸ್ತಿ ಹಾನಿ ಮತ್ತು ಅರಣ್ಯ ಕಾಯ್ದೆಯಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿ ಕಳುಹಿಸಿದ್ದಾರೆ.
ಹೋರಾಟದ ಹಿನ್ನೆಲೆ ಏನು?
ಸುಮಾರು ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆದಿತ್ತು. ಈ ಯೋಜನೆಗಾಗಿ ವಿಶುಕುಮಾರ್ ಸೇರಿದಂತೆ ಒಟ್ಟು 21 ರೈತರಿಗೆ ಸೇರಿದ 3.55 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಜಮೀನಿನಲ್ಲಿ ರೈತರು ಬರೋಬ್ಬರಿ 3 ಸಾವಿರಕ್ಕೂ ಅಧಿಕ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಬೆಳೆಸಿದ್ದರು. ರಸ್ತೆಗಾಗಿ ಈ ಎಲ್ಲಾ ಮರಗಳನ್ನು ತೆರವುಗೊಳಿಸಲಾಗಿತ್ತು.
ಅಧಿಕಾರಿಗಳ ವಿರುದ್ಧ ವಂಚನೆ ಆರೋಪ
ನಿಯಮದ ಪ್ರಕಾರ ಸ್ವಾಧೀನಪಡಿಸಿಕೊಂಡ ಭೂಮಿ ಮತ್ತು ಅಲ್ಲಿನ ಮರಗಳಿಗೆ ಸರ್ಕಾರ ಪರಿಹಾರ ನೀಡಬೇಕಿತ್ತು. ಆದರೆ, ಅಧಿಕಾರಿಗಳು ಮರಗಳ ಲೆಕ್ಕಾಚಾರದಲ್ಲಿ ಭಾರೀ ಗೋಲ್‍ಮಾಲ್ ಮಾಡಿದ್ದಾರೆ ಎಂಬುದು ವಿಶುಕುಮಾರ್ ಅವರ ಗಂಭೀರ ಆರೋಪವಾಗಿದೆ.
ಜಮೀನಿನಲ್ಲಿ 3,000ಕ್ಕೂ ಹೆಚ್ಚು ಶ್ರೀಗಂಧದ ಮರಗಳಿದ್ದರೂ, ಅಧಿಕಾರಿಗಳು ಕೇವಲ 850 ಗಿಡಗಳಿದ್ದವು ಎಂದು ತಪ್ಪು ಲೆಕ್ಕ ನೀಡಿದ್ದಾರೆ. ಇದರಿಂದ ರೈತರಿಗೆ ಸಿಗಬೇಕಾದ ಕೋಟ್ಯಂತರ ರೂಪಾಯಿ ಪರಿಹಾರ ಕೈತಪ್ಪುತ್ತಿದೆ. ವಾಸ್ತವವಾಗಿ, ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿದ್ದ ಶ್ರೀಗಂಧದ ಮರಗಳಿಗೆ 150 ಕೋಟಿ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ, ಪರಿಹಾರ ವಿತರಣೆಗೆ ನ್ಯಾಯಾಲಯ ಕೂಡ ಆದೇಶ ನೀಡಿತ್ತು. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ನಮ್ಮ ನೋವು ಸರ್ಕಾರಕ್ಕೆ ಮುಟ್ಟಲಿ
ಘಟನೆ ಕುರಿತು ಮಾತನಾಡಿದ ಟಿ.ಎನ್.ವಿಶುಕುಮಾರ್, ನಮ್ಮ ಜಮೀನಿನಲ್ಲಿ ನಾವು ಕಷ್ಟಪಟ್ಟು ಬೆಳೆಸಿದ್ದ ಶ್ರೀಗಂಧದ ಮರಗಳನ್ನು ಹೆದ್ದಾರಿಗಾಗಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಡಿಯಿತು. ಆದರೆ ಅದಕ್ಕೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ನಮ್ಮ ಮರ ಕಡಿದ ಸರ್ಕಾರಕ್ಕೆ ನಮ್ಮ ನೋವು ಅರ್ಥವಾಗುತ್ತಿಲ್ಲ. ಅದಕ್ಕಾಗಿಯೇ ಸರ್ಕಾರದ ಜಮೀನಿನಲ್ಲಿರುವ ಮರವನ್ನು ಕಡಿದು ನಮ್ಮ ನೋವನ್ನು ಸಾಂಕೇತಿಕವಾಗಿ ತೋಡಿಕೊಂಡಿದ್ದೇವೆ. ಈಗಲಾದರೂ ಸರ್ಕಾರ ಎಚ್ಚೆತ್ತು ನಮಗೆ ನ್ಯಾಯಯುತ ಪರಿಹಾರ ಒದಗಿಸಲಿ ಎಂದು ಆಗ್ರಹಿಸಿದ್ದಾರೆ.








