ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಒಪ್ಪಿಗೆ ನೀಡಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ. ನಾನು ಸಚಿವನಾಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ. ಆದರೆ, ನಮ್ಮಲ್ಲಿ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸಿಎಂ (Chief Minister) ಆಗುವ ಕನಸು ಕಾಣುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆಸೆ ಇದೆ. ನಿಮ್ಮಂಥ ಜನರಿಗೂ ಆಸೆ ಇರುತ್ತೆ. ಲೈಫ್ ನಲ್ಲಿ ಗುರಿ ಮುಖ್ಯ. ನಾನು ಸಿದ್ದರಾಮಯ್ಯಗಿಂತ 2 ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರುತ್ತಾರೆ ಎಂದು ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ಅವರು ರಾಜೀನಾಮೆ ನೀಡಿದ್ದರು. ಈಗ ಪ್ರತಿದಿನವೂ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಈ ಹಿಂದೆ ಮೌಲ್ಯಾಧರಿತ ರಾಜಕಾರಣ ಮಾಡುತ್ತಿದ್ದರು. ಅದೇ ರೀತಿ ನಡೆದು ಕೊಳ್ಳುತ್ತಿದ್ದರು. ಈಗ ಮೌಲ್ಯಾಧಾರಿತ ರಾಜಕಾರಣವೇ ನಡೆಯುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.








