ಹಸುಳೆ ಬಲಿಪಡೆದ ಕೊರೊನಾ; ಹೆಚ್ಚುತ್ತಲೇ ಮಹಾಮಾರಿ ಅಬ್ಬರ..!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಹಾಮಾರಿ ಕೊರೊನಾ ರಣಕೇಕೆ ಮುಂದುವರಿದೆ. ಬೆಂಗಳೂರಿನಲ್ಲಿ 17 ದಿನದ ಹಸುಗೂಸು ಕೊರೊನಾಗೆ ಬಲಿಯಾಗಿದೆ.
ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹಸುಳೆ ಜಲೈ 1ರಂದು ಮೃತಪಟ್ಟಿತ್ತು. ಮೃತ ಮಗುವಿನ ಗಂಟಲು ಮಾದರಿಯ ವರದಿ ಇಂದು ಬಂದಿದೆ. ಕೊರೊನಾದಿಂದ ಮಗು ಮೃತಪಟ್ಟಿರುವುದು ದೃಢಪಟ್ಟಿದೆ. ಇದೇ ವೇಳೆ ಮೃತ ಮಗುವಿನ ತಾಯಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಲ್ಲೇಶ್ವರಂ ಪೊಲೀಸ್ ಠಾಣೆಗೂ ಮಹಾಮಾರಿ ಕಂಟಕ ಎದುರಾಗಿದೆ. ಠಾಣೆಯ ಪೇದೆ ಹಾಗೂ ಹೋಂ ಗಾರ್ಡ್ ಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ. ಬಳ್ಳಾರಿ ಮತ್ತೆ ಕೊರೊನಾಗೆ ಗಡಗಡ ನಡುತ್ತಿದೆ. ಬಳ್ಳಾರಿಯ ಪ್ರಮುಖ ಆಸ್ಪತ್ರೆ ವಿಮ್ಸ್ ನ ವೈದ್ಯರು ಸೇರಿದಂತೆ 19 ಮಂದಿ ಸಿಬ್ಬಂದಿಗೆ ಕೊರೊನಾ ಬಂದಿದೆ. ಹೀಗಾಗಿ ಆಸ್ಪತ್ರೆಯ 60 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಇಂದು ಕೊರೊನಾಗೆ ಮತ್ತೊಂದು ಬಲಿ ಯಾಗಿದೆ. ವೃದ್ಧೆಯೊಬ್ಬರು ಕೊರೊನಾಗೆ ಮೃತ ಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆ ಕಂಡಿತು. ಹಾವೇರಿಯಲ್ಲಿ ಪೊಲೀಸರಿಗೆ ಕೊರೊನಾ ಕಂಟಕ ತಂದಿದೆ. ಕಂಟೇನೈಮೆಂಟ್ ಝೋನ್ ಡ್ಯೂಟಿ ಮಾಡಿದ್ದ ಎಎಸ್ ಐಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಎಎಸ್ ಐ ಸಂಪರ್ಕ ಇದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಠಾಣೆಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಕೊಪ್ಪಳ ಪೊಲೀಸರಿಗೆ ಕೊರೊನಾ ಆತಂಕ ಎದುರಾಗಿದೆ. ಠಾಣೆಯ ಪೇದೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ.








