ಲಕ್ನೋ: ದುಷ್ಕರ್ಮಿಗಳು ರೈಲು ಹಳಿ ಮೇಲೆ ಸಿಲಿಂಡರ್ ಇಟ್ಟು ದುಷ್ಕೃತ್ಯ ನಡೆಸಲು ಸಂಚು ರೂಪಿಸಿರುವ ಘಟನೆ ಉತ್ತರ ಪ್ರದೇಶದ (Uttarpradesh) ಕಾನ್ಪುರದಲ್ಲಿ (Kanpur) ನಡೆದಿದೆ.
ಕಾನ್ಪುರದಿಂದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್ ಪ್ರೆಸ್ (Kalindi Express) ಹಳಿ ಮೇಲಿದ್ದ ಸಿಲಿಂಡರ್ ಗೆ ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸಿಲಿಂಡರ್ ದೂರಕ್ಕೆ ಚಿಮ್ಮಿ ಸ್ಫೋಟಗೊಂಡಿದೆ. ಈ ರೈಲು ಕಾನ್ಪುರದಿಂದ ಕಾಸ್ ಗಂಜ್ ಮಾರ್ಗದಲ್ಲಿ ರೈಲು ಸಂಚರಿಸುತ್ತಿತ್ತು. ಮುಂಡೇರಿ ಕ್ರಾಸಿಂಗ್ ಬಳಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.
ರೈಲು ಹಳಿಯ ಮೇಲಿದ್ದ ಸಿಲಿಂಡರ್ ನ್ನು ನೋಡಿ ಚಾಲಕ ರಾಜ್ ಕಿಶೋರ್ ರೈಲಿನ ತುರ್ತು ಬ್ರೇಕ್ ಬಳಸಿದ್ದಾರೆ. ಘಟನೆಯ ನಂತರ 22 ನಿಮಿಷಗಳ ಕಾಲ ನಿಂತ ರೈಲು ಮತ್ತೆ ಪ್ರಯಾಣ ಬೆಳೆಸಿದೆ ಎನ್ನಲಾಗಿದೆ.
ತನಿಖೆ ವೇಳೆ ಸುಮಾರು 50 ಮೀಟರ್ ದೂರದಲ್ಲಿ ತುಂಬಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಬೆಂಕಿ ಪೊಟ್ಟಣ ಹಾಗೂ ಪೆಟ್ರೋಲ್ ಬಾಟಲ್ ಪತ್ತೆಯಾಗಿದ್ದು, ಸ್ಫೋಟಕಗಳೆಂದು ಭಾವಿಸಲಾದ ಪುಡಿಯ ವಸ್ತು ಪತ್ತೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








