ಬೀಜಿಂಗ್: ಜನಸಂಖ್ಯೆ ಸೇರಿದಂತೆ ಎಲ್ಲದರಲ್ಲೂ ಭಾರತದೊಂದಿಗೆ ಪೈಪೋಟಿ ನಡೆಸುತ್ತಿರುವ ಚೀನಾದಲ್ಲಿ ಜನಸಂಖ್ಯೆ (Population) ಇಳಿಕೆಯಾಗುತ್ತಿದ್ದು, ಉದ್ಯೋಗಿಗಳ ಸಂಖ್ಯೆಯೂ ಇಳಿಕೆ ಕಾಣುತ್ತಿದೆ. ಹೀಗಾಗಿ ಚೀನಾ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು (Retirement Age) ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಪುರುಷರ ನಿವೃತ್ತಿ ವಯಸ್ಸನ್ನು 63ಕ್ಕೆ ಏರಿಸಿದರೆ ಮಹಿಳೆಯರ ನಿವೃತ್ತಿ ವಯಸ್ಸನ್ನು ವೃತ್ತಿಗೆ ಅನುಗುಣವಾಗಿ 55 ಮತ್ತು 58ಕ್ಕೆ ಏರಿಸಲಾಗಿದೆ. ಚೀನಾ ಯಾವಾಗಲೂ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಳ ಮಾಡಿರಲಿಲ್ಲ. 1950 ರಿಂದ ಜಾರಿಯಲ್ಲಿದ್ದ ನಿಯಮವನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿತ್ತು. ಈಗ ಅನಿವಾರ್ಯತೆಯಿಂದಾಗಿ ನಿವೃತ್ತಿ ವಯಸ್ಸು ಹೆಚ್ಚಿಸಲಾಗಿದೆ. ಸದ್ಯ ನಿವೃತ್ತಿ ವಯಸ್ಸು ಪುರುಷರಿಗೆ 60 ಮತ್ತು ಮಹಿಳೆಯರಿಗೆ ವೃತ್ತಿಗೆ ಅನುಗುಣವಾಗಿ 50 (ಬ್ಲೂ ಕಾಲರ್) ಮತ್ತು 55 (ವೈಟ್ ಕಾಲರ್) ಆಗಿದೆ.
ಆದರೆ, ಸದ್ಯ ಅಲ್ಲಿ ಜನಸಂಖ್ಯೆ ಪ್ರಮಾಣ ಇಳಿಕೆ ಕಾಣುತ್ತಿದೆ. ಹಿರಿಯ ನಾಗರಿಕರ ಸಂಖ್ಯೆ (Old Age People) ಏರಿಕೆ ಆಗುತ್ತಿದೆ. ಹಿಂದೆ ಜಾರಿಗೆ ತಂದಿದ್ದ ಕುಟುಂಬಕ್ಕೆ ಒಂದೇ ಮಗು ನೀತಿಯಿಂದಾಗಿ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ನಿವೃತ್ತಿ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಪಿಂಚಣಿ ಸಂಕಷ್ಟವೂ ಅಲ್ಲಿ ತಲೆದೋರಿದೆ.
ಹೀಗಾಗಿ ಚೀನೀ ಪ್ರಾಂತ್ಯಗಳು ದೊಡ್ಡ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ. ಈಗ ನಿವೃತ್ತಿ ವಯಸ್ಸು ಏರಿಕೆ ಮಾಡಿದ್ದರಿಂದ ಈ ಪ್ರಾಂತ್ಯಗಳಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ವಿಶ್ವದಲ್ಲಿ ಸದ್ಯ ಭಾರತದ ಜನಸಂಖ್ಯೆ 142 ಕೋಟಿಗೆ ಏರಿಕೆ ಕಂಡಿದ್ದರೆ, ಚೀನಾ ಜನಸಂಖ್ಯೆ 141 ಕೋಟಿಗೆ ಕುಸಿದಿದೆ.