ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಟ್ರಂಪ್(Donald Trump) ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ.
ಫ್ಲೋರಿಡಾದ (Florida) ಗಾಲ್ಫ್ ಕ್ಲಬ್ ನಲ್ಲಿದ್ದ ಟ್ರಂಪ್ ಮೇಲೆ ಅಜ್ಞಾತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ (USA) ಪೆನ್ಸಿಲ್ವೇನಿಯಾದಲ್ಲಿರುವ ಬಟ್ಲರ್ ಎಂಬಲ್ಲಿ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರ ಮೇಲೆ ಸುಮಾರು 442 ಅಡಿ ದೂರದಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಅಂದು ಹಾರಿದ ಗುಂಡು ಅವರ ಬಲಕಿವಿಯ ತುದಿಗೆ ತಾಕಿ ರಕ್ತ ಸೋರಿಕೆಯಾಗಿತ್ತು. ಕೂದಲೆಳೆ ಅಂತರದಲ್ಲಿ ಟ್ರಂಪ್ ಪಾರಾಗಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್ ನಲ್ಲಿರುವ ತಮ್ಮದೇ ಗಾಲ್ಫ್ ಕ್ಲಬ್ ನಲ್ಲಿ ಟ್ರಂಪ್ ಇಂಟರ್ ನ್ಯಾಷನಲ್ ಗಾಲ್ಫ್ ಕ್ಲಬ್ ಗೆ (Golf Club) ಆಗಮಿಸಿದ್ದರು. ಗಾಲ್ಫ್ ಆಟ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಗಾಲ್ಫ್ ಕ್ಲಬ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಟ್ರಂಪ್ ಕಾರಿನ ಫೋಟೋ ತೆಗೆದುಕೊಳ್ಳುತ್ತಿದ್ದುದನ್ನು ತಾವು ನೋಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ಮಾಹಿತಿ ಸಂಗ್ರಹಿಸಿದ ಎಫ್‌ಬಿಐ ಏಜೆಂಟ್‌ಗಳು ಶಂಕಿತ ದಾಳಿಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನಮ್ಮ ದೇಶದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.








