ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ನಿನ್ನೆ ಮುಗಿದಿದೆ.ಶೇಕಡಾ 84 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಚಿತ್ರರಂಗದ ದಿಗ್ಗಜರು ಮತ್ತು ರಾಜಕೀಯ ನಾಯಕರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಆದರೆ ಈ ಸಂಭ್ರಮದ ನಡುವೆಯೇ ಖ್ಯಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ವಿವಾದವೊಂದಕ್ಕೆ ಸಿಲುಕಿದ್ದಾರೆ. ಮಗಳು ಶ್ರುತಿ ಹಾಸನ್ ಜೊತೆ ಮತದಾನ ಮಾಡಲು ಬಂದಿದ್ದ ಕಮಲ್ ಹಾಸನ್ ಅವರು ನಿಯಮ ಮುರಿದು ಕ್ಯೂ ಜಂಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಿನಿಮಾಗಳಲ್ಲಿ ಮತ್ತು ವೇದಿಕೆಗಳ ಮೇಲೆ ಸಮಾನತೆಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ಕಮಲ್ ಹಾಸನ್ ಅವರಿಗೆ ಕೇವಲ ಎರಡು ನಿಮಿಷ ಸರದಿಯಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲವೇ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಚೆನ್ನೈನ ಪೋಲಿಂಗ್ ಸ್ಟೇಷನ್ ಒಂದಕ್ಕೆ ಬಂದಿದ್ದ ಇಬ್ಬರೂ ನಟರು ಆರಂಭದಲ್ಲಿ ಸಾಲಿನಲ್ಲಿ ನಿಂತಿದ್ದರೂ ನಂತರ ನೇರವಾಗಿ ಮತಗಟ್ಟೆಯ ಒಳಗೆ ಪ್ರವೇಶಿಸಿದ್ದಾರೆ. ಈ ದೃಶ್ಯಗಳು ಎಎನ್ ಐ ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಇವರ ಸೆಲೆಬ್ರಿಟಿ ಸ್ಟೇಟಸ್ ಪ್ರದರ್ಶನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಜನರಿಗೆ ಬುದ್ಧಿ ಹೇಳುವವರೇ ನಿಜ ಜೀವನದಲ್ಲಿ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಆದರೆ ಈ ಆರೋಪಗಳಿಗೆ ಕಮಲ್ ಹಾಸನ್ ಅಭಿಮಾನಿಗಳು ಮತ್ತು ಬೆಂಬಲಿಗರು ಬೇರೆಯದೇ ಸಮರ್ಥನೆ ನೀಡಿದ್ದಾರೆ. ಕಮಲ್ ಹಾಸನ್ ಅವರಂತಹ ಸೂಪರ್ ಸ್ಟಾರ್ ಗಳು ದೀರ್ಘಕಾಲ ಸರದಿಯಲ್ಲಿ ನಿಂತರೆ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ ಮತ್ತು ಮಾಧ್ಯಮಗಳ ಹಾವಳಿಯಿಂದ ಅಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಸಾಮಾನ್ಯ ಮತದಾರರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಲ್ಲಿನ ಪೊಲೀಸ್ ಅಧಿಕಾರಿಗಳೇ ಅವರನ್ನು ಸಾಲಿನಿಂದ ಕರೆದು ಮತ ಹಾಕಲು ಕಳುಹಿಸಿದ್ದಾರೆ ಎಂದು ವಾದಿಸಿದ್ದಾರೆ. ವಿಡಿಯೋದಲ್ಲಿ ಕೂಡ ಪೊಲೀಸರು ಕ್ಯಾಮೆರಾ ಸರಿಸುವಂತೆ ಹೇಳುವುದು ಮತ್ತು ಕಮಲ್ ಹಾಸನ್ ಅವರು ಸಾಲಿನಲ್ಲಿದ್ದ ವ್ಯಕ್ತಿಯ ಬಳಿ ಅನುಮತಿ ಕೇಳುವುದು ಕಂಡುಬಂದಿದೆ.
ಇದೇ ವೇಳೆ ತಮಿಳು ಚಿತ್ರರಂಗದ ಪ್ರಮುಖ ನಟರಾದ ಅಜಿತ್ ಕುಮಾರ್, ವಿಕ್ರಂ, ಧನುಷ್ ಮತ್ತು ಶಶಿಕುಮಾರ್ ಅವರು ಕೂಡ ಮತ ಚಲಾಯಿಸಿದ್ದಾರೆ. ವಿಶೇಷವಾಗಿ ನಟ ವಿಜಯ್ ಅವರು ತಾವು ಹೊಸದಾಗಿ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಮೊದಲ ಚುನಾವಣೆಯಲ್ಲಿ ಮತ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ತಮಿಳುನಾಡು ಸೇರಿದಂತೆ ಕೇರಳ ಮತ್ತು ಇತರ ರಾಜ್ಯಗಳ ಚುನಾವಣಾ ಫಲಿತಾಂಶವು ಮೇ 4 ರಂದು ಹೊರಬೀಳಲಿದ್ದು ಇಡೀ ದೇಶದ ಕಣ್ಣು ಈ ಫಲಿತಾಂಶದ ಮೇಲೆ ನೆಟ್ಟಿದೆ.








