ಚಿಕ್ಕಬಳ್ಳಾಪುರ:ನಗರದ ಕನ್ನಡ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿತು. ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಹಾಗೂ ಅವರ ವಿರುದ್ಧ ಒಕ್ಕಲಿಗ ಸಮುದಾಯದ ಆಕ್ರೋಶದಿಂದಾಗಿ ಕಾರ್ಯಕ್ರಮವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಕಾರ್ಯಕ್ರಮದ ಆರಂಭದಿಂದಲೇ ಬಿಗುವಿನ ವಾತಾವರಣವಿದ್ದು, ನಂತರ ಅದು ಚಪ್ಪಲಿ ಎಸೆತದಂತಹ ಗಂಭೀರ ಸ್ವರೂಪಕ್ಕೆ ತಿರುಗಿತು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು ವೇದಿಕೆಯ ಮೇಲೆ ಪದೇ ಪದೇ ಮೀಸೆ ತಿರುವಿ, ಎದೆ ತಟ್ಟಿಕೊಳ್ಳುತ್ತಾ ಸವಾಲು ಹಾಕುವ ರೀತಿಯಲ್ಲಿ ಹಾವಭಾವ ಪ್ರದರ್ಶಿಸಿದರು. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ವರ್ತಿಸಿದ ಶಾಸಕರ ಈ ನಡವಳಿಕೆ ಅಲ್ಲಿದ್ದವರನ್ನು ಕೆರಳಿಸಿತು. ಈ ವೇಳೆ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಶಾಸಕರನ್ನು ಗುರಿಯಾಗಿಸಿಕೊಂಡು ಚಪ್ಪಲಿ ಎಸೆದರು. ಆದರೆ ಚಪ್ಪಲಿಯು ಶಾಸಕರಿಗೆ ತಗಲುವ ಬದಲು ಅಲ್ಲಿಯೇ ಭದ್ರತೆಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಬಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಚಪ್ಪಲಿ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದರು.
ಈ ಘಟನೆಯಿಂದ ಕೆರಳಿದ ಒಕ್ಕಲಿಗ ಸಮುದಾಯದ ಮುಖಂಡರು ಮತ್ತು ಜೆಡಿಎಸ್ ಕಾರ್ಯಕರ್ತರು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕ ಪ್ರದೀಪ್ ಈಶ್ವರ್ ಒಬ್ಬ ಹುಚ್ಚನಂತೆ ವರ್ತಿಸುತ್ತಿದ್ದಾರೆ, ಅವರು ಕೂಡಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಅವರನ್ನು ಕಾರ್ಯಕ್ರಮದಿಂದ ಹೊರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿ ವೇದಿಕೆಯ ಮುಂಭಾಗದಲ್ಲಿ ಜಟಾಪಟಿ ನಡೆಸಿದರು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮಂಗಳನಾಥ ಸ್ವಾಮೀಜಿ ಅವರು ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಇದೇ ಸಮಯದಲ್ಲಿ ಸಂಸದ ಡಾ ಕೆ ಸುಧಾಕರ್ ವೇದಿಕೆಗೆ ಆಗಮಿಸುತ್ತಿದ್ದಂತೆ ವಾತಾವರಣ ಮತ್ತಷ್ಟು ಗಂಭೀರವಾಯಿತು. ಸುಧಾಕರ್ ಅವರು ಮಾತನಾಡುತ್ತಾ, ಒಕ್ಕಲಿಗ ಸಮುದಾಯವು ಅಶಕ್ತರು ಮತ್ತು ಇತರ ಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡಬೇಕೆಂದು ಮಾರ್ಮಿಕವಾಗಿ ನುಡಿದರು.
ಶಾಸಕ ಪ್ರದೀಪ್ ಈಶ್ವರ್ ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ ಪ್ರತಿಭಟನಾಕಾರರು ತೀವ್ರವಾಗಿ ಅಡ್ಡಿಪಡಿಸಿದರು. ಗದ್ದಲದ ನಡುವೆಯೇ ಭಾಷಣ ಆರಂಭಿಸಿದ ಶಾಸಕರು, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಸಾಮಂತರಾಗಿದ್ದ ಕೆಂಪೇಗೌಡರ ಜಯಂತಿಯ ಶುಭಾಶಯಗಳು ಎಂದು ಹೇಳುವ ಮೂಲಕ ತಮ್ಮ ಮಾತು ಮುಂದುವರಿಸಲು ಪ್ರಯತ್ನಿಸಿದರು. ಸದ್ಯ ನಿನ್ನೆ ನಡೆದ ಈ ಘಟನೆ
ಇಡೀ ನಗರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.








