ಬೆಂಗಳೂರು: ಯುವಕನನ್ನು ನಡು ರಸ್ತೆಯಲ್ಲೇ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರೌಡಿಶೀಟರ್ (Rowdy Sheeter) ಕಾಲಿಗೆ ಗುಂಡೇಟು ನೀಡಿ ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಜ್ಞಾನಭಾರತಿಯ ಉಲ್ಲಾಳದ ಹತ್ತಿರ ನಡೆದಿದೆ. ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬುನನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಆತನ ಬಲಾಗಲಿಗೆ ಗುಂಡೇಟು ನೀಡಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ (Kamakshipalya Police Station) ಕೃತ್ಯ ಎಸಗಿದ್ದ ಕಡುಬು ಮೇಲೆ ವಾರಂಟ್ ಇದ್ದರೂ ತಲೆಮರೆಸಿಕೊಂಡಿದ್ದ. ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದ. ನಂತರ ಆತನ ವಿಡಿಯೋ ಹರಿಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಉಲ್ಲಾಳದ ಹಿಲ್‌ರಾಕ್ ಸ್ಕೂಲ್ ಹತ್ತಿರ ಬಂಧನಕ್ಕೆ ಬಲೆ ಬೀಸಿದ್ದರು.
ಬಂಧನಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಡುಬು ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ ಎಂಬುವವರ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಕಡುಬುನನ್ನು ಬಂಧಿಸಿದ್ದಾರೆ








