ಬೆಂಗಳೂರು : ಕೊರೊನಾ ಹಿನ್ನೆಲೆ ಈ ಬಾರಿಯ ಹುಟ್ಟಹಬ್ಬವನ್ನ ಆಚರಿಸಿಕೊಳ್ಳದಿರಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ಸಹ ಶಿವಣ್ಣ ರವಾನಿಸಿದ್ದಾರೆ. ಆದ್ರೆ ಕರುನಾಡ ಚಕ್ರವರ್ತಿಯ ಬರ್ತ್ ಡೇಯನ್ನು ಕೊರೊನಾ ನಿಯಮಗಳನ್ನು ಉಲ್ಲಂಘಿಸದೇ ಆಚರಿಸಿಲು ಎಸ್ ಆರ್ ಕೆ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದು, ಪ್ರೀತಿಯ ಶಿವಣ್ಣನ ಬರ್ತಡೇಗೆ ಅಡ್ವಾನ್ಸ್ ಆಗಿ ಗಿಫ್ಟ್ ನೀಡಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೂ 7 ದಿನ ಬಾಕಿ ಇದ್ದು, ಅವರ ಅಭಿಮಾನಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಕಿಚ್ಚ ಸುದೀಪ್ ಈಗಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.
ನಟ ಶಿವರಾಜ್ ಕುಮಾರ್ ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದಿರುವ ಶಿವಣ್ಣ, ನೀವು ಮನೆ ಬಳಿ ಸೇರಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಸಂಗತಿ. ಹೀಗಾಗಿ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ, ನಾನೂ ಸಹ ಮನೆಯಲ್ಲಿರುವುದಿಲ್ಲ. ಕೊರೊನಾ ಪರಿಸ್ಥಿತಿ ತಿಳಿಯಾದ ಮೇಲೆ ಒಟ್ಟಿಗೆ ಸೇರೋಣ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಶಿವಣ್ಣನ ಹುಟ್ಟುಹಬ್ಬವನ್ನು ಸಿಡಿಪಿ(ಕಾಮನ್ ಡಿಪಿ) ಮೂಲಕ ಸಾಮಾಜಿಕ ಜಾಲತಾಣಗಳಲ್ಲೇ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈಗಾಗಲೇ ಇದನ್ನು ಸಿದ್ಧಪಡಿಸಲಾಗಿದ್ದು, ಶನಿವಾರ ಸಂಜೆ ಕಿಚ್ಚ ಸುದೀಪ್ ಅವರಿಂದ ಬಿಡುಗಡೆಗೊಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಸಿಡಿಪಿ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಸುದೀಪ್, ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಸಿಡಿಪಿ ಡಿಸೈನ್ ಮಾಡಿದ್ದು, ಇದನ್ನು ಬಿಡುಗಡೆಗೊಳಿಸಲು ಸಂತಸವಾಯಿತು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಶಿವಣ್ಣನಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.









