ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ಕುರಿತು ರಾಜ್ಯದಲ್ಲಿಯೂ ನಿಯಮ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಯೋಜನೆಯಡಿ ನೂತನ 65 ಅಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರ ರಸ್ತೆ ನಿಯಮ ಪಾಲನೆ ಮಾಡಬೇಕು. ರಾಜ್ಯದಲ್ಲಿ ಹೊಸ 65 ಅಂಬುಲೆನ್ಸ್ ಸೇರ್ಪಡೆ ಆಗುತ್ತಿವೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಈ ಅಂಬುಲೆನ್ಸ್ ನೀಡುತ್ತಿದ್ದೇವೆ. ಈಗಾಗಲೇ ರಾಜ್ಯದಲ್ಲಿ 108 ಅಂಬುಲೆನ್ಸ್ ಕೆಲಸ ಮಾಡುತ್ತಿವೆ. ಜೊತೆಗೆ 65 ಅಂಬುಲೆನ್ಸ್ ಬರುತ್ತವೆ. 39 ಬೇಸಿಕ್ ಲೈಫ್ ಸಪೋರ್ಟ್, 26 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಅಂಬುಲೆನ್ಸ್ ಗಳಾಗಿವೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ 10 ಸಾವಿರ ಜನರು ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವಕರು, ಶಾಲಾ ಮಕ್ಕಳು ಹೆಚ್ಚಾಗಿ ಸಾವನ್ನಪ್ಪುತ್ತಿರುವುದು ನೋವಿನ ಸಂಗತಿಯಾಗಿದೆ. ಹೀಗಾಗಿ ಸಾವು ತಡೆಯಲು ರಸ್ತೆ ಸುರಕ್ಷತಾ ನಿಯಮ ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.
ವಿದೇಶಗಳಲ್ಲಿ ನಿಯಮ ಪಾಲನೆ ಮಾಡದಿದ್ದರೆ ಲೈಸೆನ್ಸ್ ರದ್ದು ಮಾಡುತ್ತಾರೆ. ನಮ್ಮಲ್ಲೂ ಲೈಸೆನ್ಸ್ ರದ್ದು ಮಾಡೋ ನಿಯಮ ಮಾಡಬೇಕು ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು.








