ಬೆಂಗಳೂರು: ಸೋಮವಾರವಾದ ಇಂದೂ ಸಹ ರಾಜ್ಯದಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 1200ಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು ಬರುವ ಸಾಧ್ಯತೆ ಇದೆ.
ಮಧ್ಯಾಹ್ನ 1 ಗಂಟೆ ಹೊತ್ತಿಗೆ 6 ಸಾವಿರ ಮಂದಿಗೆ ನಡೆಸಿದ ಪರೀಕ್ಷೆಯಲ್ಲಿ 1100 ಮಂದಿ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನರು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ.
ಮಹಾಮಾರಿಗೆ ಎಎಸ್‌ಐ ಬಲಿ..!
ಬೆಂಗಳೂರು ನಗರ ಪೊಲೀಸರನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೊನಾಗೆ ಬೆಂಗಳೂರಿನಲ್ಲಿ ಇಂದು ಮತ್ತೊಬ್ಬ ಎಎಸ್‌ಐ ಬಲಿಯಾಗಿದ್ದಾರೆ. ನಗರದಲ್ಲಿ ಇದುವರೆಗೆ 6 ಮಂದಿ ಪೊಲೀಸರು ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ಮೃತಪಟ್ಟ ಪೊಲೀಸರಲ್ಲಿ ಬಹುತೇಕರು ಎಎಸ್‌ಐಗಳೇ ಎನ್ನುವುದೇ ಗಮನಿಸಬೇಕಾದ ಸಂಗತಿಯಾಗಿದೆ.
ಮಹಿಳಾ ಪೇದೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.
ಮಹಿಳಾ ಪೇದೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಧಿಕಾರಿಗಳ ಯಡವಟ್ಟು
ಶಿವಮೊಗ್ಗದ ಜನವಸತಿ ಪ್ರದೇಶವಾದ ಗೋಪಾಲಗೌಡ ಬಡಾವಣೆಯ ಸ್ಮಶಾನದಲ್ಲಿ ಕೊರೊನಾ ಮೃತಪಟ್ಟ ವೃದ್ಧೆಯ ಅಂತ್ಯಕ್ರಿಯೆ ಮಾಡಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.
ವಸತಿ ಪ್ರದೇಶದಿಂದ ದೂರವಿರುವ ಖಾಲಿ ಜಾಗದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಸರ್ಕಾರ ಸೂಚಿಸಿದ್ದರೂ, ನಗರದೊಳಗಿನ ಜನವಸತಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ಮಾಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.








