ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂಬ ಕಾರಣಕ್ಕೆ ಪಾಪಿಯೊಬ್ಬ ತನ್ನ ಪ್ರೇಯಸಿಯ ಪುತ್ರನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಕಾಕಲವಾರ (Kakalwar) ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿರುವ ಬಾಲಕನನ್ನು 11 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ನರೇಂದ್ರನ ತಾಯಿ ಗೋವಿಂದಮ್ಮಳ ಜೊತೆ ಅಬ್ದುಲ್ ಎಂಬಾತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಅಲ್ಲದೇ, ಇತ್ತೀಚೆಗೆ ಆರೋಪಿ, ತನ್ನ ಪ್ರೇಯಸಿಯಾಗಿರುವ ಗೋವಿಂದಮ್ಮಳಿಗೆ ಓಡಿ ಹೋಗಿ ಮದುವೆಯಾಗೋಣ ಎಂದು ಪೀಡಿಸುತ್ತಿದ್ದ. ಆದರೆ, ಅವಳು ಮಗನಿಗಾಗಿ ನಿರಾಕರಿಸಿದ್ದಳು. ಹೀಗಾಗಿ ಮಗನ ಮೇಲೆ ಪಾಪಿ ಕೋಪಗೊಂಡಿದ್ದ.
ಹೀಗಾಗಿ ಮಗನನ್ನು ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸಿ, ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಯು ಮಗುವನ್ನು ಕರೆದುಕೊಂಡು ಹೋಗಿ, ಕಿರಾಣಿ ಅಂಗಡಿಯಲ್ಲಿ ಚಾಕೊಲೇಟ್ ಕೊಡಿಸಿ ಕರೆದುಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.