ಬೆಳಗಾವಿ: ದೈಹಿಕ ಸಂಪರ್ಕಕಕ್ಕೆ ಪತ್ನಿ ಒಪ್ಪಿಲ್ಲ ಎಂದು ಪಾಪಿಯೊಬ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಂತೆ ಪತ್ನಿ, ಪಾಪಿಯನ್ನು ಕೊಲೆ ಮಾಡಿ ದೇಹವನ್ನು ಎರಡು ತುಂಡು ಮಾಡಿ ಎಸೆದಿದ್ದಾಳೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯನ್ನು ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದೆ. ಆತನ ಪತ್ನಿ ಸಾವಿತ್ರಿ ಕೊಲೆ ಮಾಡಿದ್ದಾಳೆ. ಮೃತ ದೇಹವನ್ನು ಎರಡು ತುಂಡಾಗಿ ಕತ್ತರಿಸಿ ಪಕ್ಕದ ಗದ್ದೆಯಲ್ಲಿ ಎಸೆದಿದ್ದಾಳೆ.
ಶ್ರೀಮಂತ ಇಟ್ನಾಳೆಯನ್ನು ಕೊಲೆ ಮಾಡಿದ ನಂತರ ಶವವನ್ನು ಮನೆಯಲ್ಲಿ ಇಟ್ಟುಕೊಂಡರೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಭಯದಿಂದ ಸಾವಿತ್ರಿ, ಎರಡು ತುಂಡು ಮಾಡಿದ್ದಾಳೆ. ನಂತರ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಾಟ ಮಾಡಿ ಪಕ್ಕದ ಗದ್ದೆಯಲ್ಲಿ ಎಸೆದಿದ್ದಾಳೆ.
ನಂತರ ರಕ್ತ ಬಿದ್ದ ಜಾಗ ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ. ಕೊಲೆ ಮಾಡಲು ಬಳಸಿದ್ದ ಕಲ್ಲನ್ನು ತೊಳೆದು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದಾಳೆ. ಗಂಡನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾಳೆ. ಕೃತ್ಯದ ವೇಳೆ ಎಚ್ಚರಗೊಂಡಿದ್ದ ಮೊದಲ ಮಗಳಿಗೆ, ನಡೆದ ವಿಚಾರವನ್ನು ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾಳೆ. ಬೆಳಗ್ಗೆ ಶವ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪತ್ನಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.








