ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನ ಮಾಜಿ ಸಿಇಒ ವಾಸುದೇವ್ ಮಯ್ಯ ಆತ್ಮಹತ್ಯೆ
ಬೆಂಗಳೂರು, ಜುಲೈ 7: ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನ ಮಾಜಿ ಸಿಇಒ, ಹಾಲಿ ಸೂಪರ್ ವೈಸರ್ ಮತ್ತು ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ವಾಸುದೇವ್ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಸಂಜೆ ಪೂರ್ಣಪ್ರಜ್ಞಾ ಲೇಔಟ್ ನಲ್ಲಿರುವ ತಮ್ಮ ಮನೆ ಮುಂದೆ ಕಾರಿನಲ್ಲಿ ಕುಳಿತು ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

2012ರಿಂದ 2018 ರವೆರೆಗೆ ಬ್ಯಾಂಕ್ ನ ಸಂಪೂರ್ಣ ವ್ಯವಹಾರವನ್ನು ಮಣೂರು ವಾಸುದೇವ ಮಯ್ಯ ಅವರು ನೋಡಿಕೊಳ್ಳುತ್ತಿದ್ದು, ಈ ಅವಧಿಯಲ್ಲಿ ಬಹು ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಸಿಇಓ ಸಂತೋಷ್ ಕುಮಾರ್ ಅವರು ವಾಸುದೇವ ಮಯ್ಯ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಕಳೆದ ಜೂನ್ 18 ರಂದು ಬಸವನಗುಡಿ ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ, ಬ್ಯಾಂಕ್, ಕೇಂದ್ರ ಕಚೇರಿ, ಚಿಕ್ಕಲಸಂದ್ರದಲ್ಲಿರುವ ವಾಸುದೇವ ಮಯ್ಯಾ ಹಾಗೂ ಅಧ್ಯಕ್ಷ ರಾಮಕೃಷ್ಣ ಮನೆಯ ಮೇಲೆ ದಾಳಿ ನಡೆಸಿದ್ದರು.
ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಚಿಕ್ಕಲಸಂಧ್ರದಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಡಿಸಿಪಿ ರೋಹಿಣಿ ಕಟೋಜಾ ಸಪೇಟ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.








