ನವದೆಹಲಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ (By Election) ಘೋಷಣೆಯಾಗಿದ್ದು, ಬಿಜೆಪಿಯಿಂದ ಎರಡು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ (Bharat Bommai), ಬಳ್ಳಾರಿಯ ಸಂಡೂರಿಗೆ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು (Bangaru Hanumanthu) ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಚನ್ನಪಟ್ಟಣದಲ್ಲಿ ಎನ್ಡಿಎ (NDA) ಅಭ್ಯರ್ಥಿ ಘೋಷಣೆಯಾಗದ ಕಾರಣ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಪಟ್ಟಿ ಬರುವ ಮುನ್ನವೇ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್ ರೇಸ್ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಹೆಸರು ಕೇಳಿ ಬಂದಿದ್ದವು. ದಿವಾಕರ್ ಕಳೆದ ಚುನಾವಣೆಯಲ್ಲಿ ಕೆಆರ್ ಪಿಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿಗೆಗೆ ನ.13 ರಂದು ಉಪಚುನಾವಣೆ ನಡೆಯಲಿದೆ. ನ.23 ರಂದು ಫಲಿತಾಂಶ ಪ್ರಕಟವಾಗಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2008, 2013, 2018 ಹಾಗೂ 2023ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.
ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆದರೆ, ಚನ್ನಪಟ್ಟಣ ಕ್ಷೇತ್ರಕ್ಕೆ ಮಾತ್ರ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಟಿಕೆಟ್ ಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಫೈಟ್ ಶುರುವಾಗಿದೆ.