ಬೆಂಗಳೂರು: ದೇಶದಲ್ಲಿ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ ಮತ್ತು ಜನರ ಆದಾಯ ಹೆಚ್ಚಿಸುವ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನೆರವಾಗಲು ‘ವಾಧ್ವಾನಿ ಫೌಂಡೇಶನ್’ ಮುಂದಾಗಿದ್ದು, ‘ವಾಧ್ವಾನಿ ಗ್ರ್ಯಾಂಟ್ಸ್’ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.
ಉತ್ತಮ ಕೆಲಸ ಮಾಡುತ್ತಿದ್ದರೂ ವಿಸ್ತರಣೆಗೆ ಹಣದ ಕೊರತೆ ಎದುರಿಸುತ್ತಿರುವ ಸಂಸ್ಥೆಗಳಿಗೆ 3ರಿಂದ 5 ವರ್ಷಗಳವರೆಗೆ ಆರ್ಥಿಕ ನೆರವು ನೀಡಿ, ಅವುಗಳ ಸಾಮರ್ಥ್ಯವನ್ನು 2ರಿಂದ 3 ಪಟ್ಟು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ವಿಶೇಷವೆಂದರೆ ಈ ಹಣವನ್ನು ವಾಪಸ್ ಕಟ್ಟಬೇಕಾಗಿಲ್ಲ ಹಾಗೂ ಸಂಸ್ಥೆಯಲ್ಲಿ ಯಾವುದೇ ಷೇರು ಪಾಲನ್ನೂ ನೀಡಬೇಕಾಗಿಲ್ಲ.
ಈ ಅನುದಾನವು ಸಂಸ್ಥೆಗಳು ಸಾಧಿಸುವ ನೈಜ ಫಲಿತಾಂಶದ ಆಧಾರದ ಮೇಲೆ ಸಿಗಲಿದೆ. ಸಂಸ್ಥೆಯ ಹಿಂದಿನ ಸಾಧನೆ, ಬೆಳವಣಿಗೆಯ ಸಾಮರ್ಥ್ಯ ಮತ್ತು ಅಗತ್ಯ ನೋಡಿ ಅನುದಾನದ ಮೊತ್ತವನ್ನು ನಿರ್ಧರಿಸಲಾಗುತ್ತದೆ; ನಿಗದಿತ ಗುರಿಗಿಂತ ಹೆಚ್ಚು ಸಾಧನೆ ಮಾಡಿದರೆ ಹೆಚ್ಚುವರಿ ನೆರವೂ ದೊರೆಯಲಿದೆ.
ಮೂರು ವಿಭಾಗಗಳಲ್ಲಿ ಅರ್ಜಿ ಆಹ್ವಾನ
ಪ್ರಮುಖವಾಗಿ ಮೂರು ವಿಭಾಗದ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು: ಯುವಕರಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವ ಸಂಸ್ಥೆಗಳು, ಸ್ಟಾರ್ಟಪ್ ಹಾಗೂ ಎಂಎಸ್ಎಂಇಗಳಿಗೆ ನೆರವಾಗಿ ಹೊಸ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳು, ಮತ್ತು ಸ್ವಯಂ ಉದ್ಯೋಗಿಗಳು ಹಾಗೂ ಕುಟುಂಬಗಳ ಆದಾಯ ಹೆಚ್ಚಿಸಲು ಶ್ರಮಿಸುವ ಸಂಸ್ಥೆಗಳು ಅರ್ಜಿ ಸಲ್ಲಿಕೆ ಮಾಡಬಹುದು. ಈಗಾಗಲೇ ಉತ್ತಮ ಫಲಿತಾಂಶ ತೋರಿಸಿರುವ ಸಂಸ್ಥೆಗಳಿಗೆ ಆದ್ಯತೆ ಸಿಗಲಿದೆ.
ಹಣಕಾಸಿನ ನೆರವಿನ ಜೊತೆಗೆ, ಆಯ್ಕೆಯಾಗುವ ಸಂಸ್ಥೆಗಳಿಗೆ ಫೌಂಡೇಶನ್ನ ಎಐ ಆಧಾರಿತ ‘ಜೆನಿಎಐ’ ವೇದಿಕೆ ಹಾಗೂ 20 ವರ್ಷಗಳ ತಾಂತ್ರಿಕ ಮಾರ್ಗದರ್ಶನವನ್ನೂ ಉಚಿತವಾಗಿ ನೀಡಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ವಾಧ್ವಾನಿ ಫೌಂಡೇಶನ್ ಸಿಇಒ ಡಾ. ಅಜಯ್ ಕೇಲಾ, “ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ಸಂಸ್ಥೆಗಳಿಗೆ ಕೊರತೆಯಿಲ್ಲ. ಆದರೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಬೇಕಾದ ಬಂಡವಾಳ ಮತ್ತು ಎಐ ತಂತ್ರಜ್ಞಾನದ ಕೊರತೆಯಿದೆ. ನಮ್ಮ ಸಂಸ್ಥೆಯ 25ನೇ ವರ್ಷದ ಸಂದರ್ಭದಲ್ಲಿ, ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನೆರವು ನೀಡಿ ಮತ್ತಷ್ಟು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುತ್ತಿದ್ದೇವೆ,” ಎಂದರು.
ಸಿಲಿಕಾನ್ ವ್ಯಾಲಿ ಉದ್ಯಮಿ ಪದ್ಮಶ್ರೀ ಡಾ. ರೋಮೇಶ್ ವಾಧ್ವಾನಿ ಸ್ಥಾಪಿಸಿರುವ ವಾಧ್ವಾನಿ ಫೌಂಡೇಶನ್, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಅರ್ಹ ಸಂಸ್ಥೆಗಳು ತಮ್ಮ ಕಾರ್ಯವಿವರಗಳೊಂದಿಗೆ ವಾಧ್ವಾನಿ ಫೌಂಡೇಷನ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಬಂದ ಅರ್ಜಿಗಳನ್ನು ನಿರಂತರವಾಗಿ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.








