ಗದಗ: ಪೈಪ್ ಲೈನ್ ದುರಸ್ತಿ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಕೋರ್ಟ್ ಸರ್ಕಲ್ ಹತ್ತಿರ ನಡೆದಿದೆ.
ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕ ಗಾಯಗೊಂಡಿದ್ದಾರೆ. ಕಾರ್ಮಿಕ ಮಣ್ಣಿನಡಿ ಸಿಲುಕುತ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡಿದ್ದ ಕಾರ್ಮಿಕ ನಜೀರ್ ಸಾಬ್ (44) ಸಾವನ್ನಪ್ಪಿದ್ದಾನೆ. ಕಾರ್ಮಿಕ ಮಂಜುನಾಥ್ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಗರದ ಕೋರ್ಟ್ ಸರ್ಕಲ್ ಬಳಿ ಗ್ಯಾಸ್ ಪೈಪ್‌ಲೈನ್ ದುರಸ್ತಿ ವೇಳೆ, ಗದಗ-ಬೆಟಗೇರಿ ಅವಳಿ ನಗರದ 24 x 7 ಪೈಪ್‌ಲೈನ್ ಹಾನಿಯಾಗಿತ್ತು. ಆ ನೀರಿನ ಪೈಪ್ ದುರಸ್ತಿ ಮಾಡಲು ಈ ಇಬ್ಬರು ಕಾರ್ಮಿಕರು ಮುಂದಾಗಿದ್ದರು. ಏಕಾಏಕಿ ಭೂಮಿ ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ನಜೀರಸಾಬ್ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








