ಹುಬ್ಬಳ್ಳಿ : ಬಿಜೆಪಿ ರೈತ ಮೋರ್ಚಾ ವತಿಯಿಂದ ‘ಪ್ರಧಾನ ಮಂತ್ರಿ ಫಾರ್ಮುಲೈಜೇಷನ್ ಆಫ್ ಮೈಕ್ರೋ ಫುಡ್ ಪ್ರೊಸ್ಸೆಸ್ಸಿಂಗ್ ಎಂಟರ್ ಪ್ರೆಸಿಸ್ (ಪಿಎಂಎಫ್ಎಇ)’ ಯೋಜನೆಯಡಿ ರೈತ ಮಹಿಳೆಯರಿಗೆ ಎತ್ತಿನ ಎಣ್ಣೆ ಗಾಣಗಳನ್ನು ಒದಗಿಸಲು ಯೋಜಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿ.ಜೆ.ಪಿ. ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವ್ಹಿ.ಎಂ. ತಿಳಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ಕುಸುಬೆ ಮತ್ತು ಶೇಂಗಾ ಬೆಳೆಯುವ ರೈತರಿದ್ದು, ಇಲ್ಲಿಯ ರೈತರಿಗೆ ‘ಪಿ.ಎಂ.ಎಫ್.ಎ.ಇ.’ ಯೋಜನೆಯಡಿ ಎತ್ತಿನ ಎಣ್ಣೆ ಗಾಣಗಳನ್ನು ಕೊಡಿಸಲು ನಿರ್ಧರಿಸಲಾಗಿದೆ. ಎಣ್ಣೆ ಗಾಣದ ಆರಂಭಕ್ಕೆ ‘ಪಿ.ಎಂ.ಎಫ್.ಎ.ಇ.’ ಯೋಜನೆಯಡಿ ಬ್ಯಾಂಕ್ ನೀಡುವ ಸಾಲಸೌಲಭ್ಯದಲ್ಲಿ ಶೇ.50ರಷ್ಟು ಸಬ್ಸಿಡಿ ಲಭಿಸುತ್ತಿದೆ. ಉಳಿದ ಶೇ.50ರಷ್ಟು ಹಣವನ್ನು ಮಾತ್ರ ರೈತರು ಮರುಪಾವತಿ ಮಾಡಬೇಕಾಗಿದೆ.
ದೇಶಿ ಹಸು ಸಂತತಿ : ರೈತ ಕುಟುಂಬಗಳಲ್ಲಿ ದೇಶಿ ಎತ್ತು ಮತ್ತು ಹಸುಗಳ ಸಂತತಿ ಸಂವರ್ಧಿಸಬೇಕು. ಯಾವುದೇ ಕಾರಣಕ್ಕೂ ಎತ್ತು ಮತ್ತು ಹಸುಗಳನ್ನು ಕಸಾಯಿಖಾನೆಗೆ ನೀಡದಂತೆ ಜನಜಾಗೃತಿ ಉಂಟು ಮಾಡುವುದೂ ಇಲ್ಲಿಯ ಮತ್ತೊಂದು ಉದ್ದೇಶವಾಗಿದೆ. ಜೊತೆಗೆ ಜನರ ಆರೋಗ್ಯ ಕಾಪಾಡುವಲ್ಲಿ ಶುದ್ಧ ಗಾಣದ ಎಣ್ಣೆಯನ್ನು ಹೆಚ್ಚು ಬಳಕೆ ಮಾಡುವುದು ಹಾಗೂ ರೈತ ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕೆನ್ನುವುದು ಬಿ.ಜೆ.ಪಿ. ರೈತ ಮೋರ್ಚಾದ ಪ್ರಮುಖ ಉದ್ದೇಶಗಳಾಗಿವೆ ಎಂಬುದನ್ನು ವಿದ್ಯಾ ಅವರು ಸಚಿವರ ಗಮನಕ್ಕೆ ತಂದರು. ಉದ್ಯಮಿ ಭರತ ಭೇರುಲಾಲ್ ಜೈನ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬಿ.ಜೆ.ಪಿ. ರೈತ ಮೋರ್ಚಾದ ಈ ಕಾರ್ಯವನ್ನು ಬೆಂಬಲಿಸಿ, ಆದಷ್ಟೂ ಶೀಘ್ರವಾಗಿ ಹುಬ್ಬಳ್ಳಿಯ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಹಮ್ಮಿಕೊಳ್ಳುವ ಸಮಾರಂಭದಲ್ಲಿ ಎತ್ತಿನ ಎಣ್ಣೆ ಗಾಣಗಳನ್ನು ವಿತರಣೆ ಮಾಡಲು ಒಪ್ಪಿಗೆ ಸೂಚಿಸಿದರು. ಎತ್ತಿನ ಎಣ್ಣೆ ಗಾಣವನ್ನು ಆರಂಭಿಸಲು ಆಸಕ್ತಿ ಹೊಂದಿರುವ ರೈತ ಮಹಿಳೆಯರು ತಮ್ಮ ಮೊಬೈಲ್ ಸಂಖ್ಯೆ : 9845255764ಕ್ಕೆ ಸಂಪರ್ಕಿಸುವಂತೆ ವಿದ್ಯಾ ವ್ಹಿ.ಎಂ. ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.








