ಆ ಒಂದು ಹೆಸರು… ಆ ಹೆಸರಿನಲ್ಲಿದೆ ಅದೆಂಥಾ ಮ್ಯಾಜಿಕ್… ಅಬ್ಬಾ….!
ಮಾಡಲ್ ನಂಬರ್ 1981… ಜುಲೈ -7… ಜೆರ್ಸಿ ನಂಬರ್ -7
ಹ್ಯಾಪಿ ಹುಟ್ಟು ಹಬ್ಬ ಮಹೇಂದ್ರ ಸಿಂಗ್ ಧೋನಿ…!
ಆ ಒಂದು ಹೆಸರು… ಭಾರತೀಯ ಕ್ರಿಕೆಟ್ ರಂಗಕ್ಕೆ ಹೊಸ ಆಯಾಮ ರೂಪಿಸಿದ್ದ ಹೆಸರು… ಆ ಒಂದು ಹೆಸರು… ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪೂರ್ತಿ ತುಂಬಿದ್ದ ಹೆಸರು… ಆ ಒಂದು ಹೆಸರು.. ವಿಶ್ವ ಕ್ರಿಕೆಟ್ ನಲ್ಲಿ ಯಾರು ಅಳಿಸಲಾಗದಂತಹ ಶಾಶ್ವತವಾದ ಹೆಸರು… ಆ ಒಂದು ಹೆಸರು… ಯುವ ಕ್ರಿಕೆಟಿಗರಿಗೆ ಮತ್ತು ಯುವ ನಾಯಕರಿಗೆ ದಾರಿದೀಪವಾಗುವಂತಹ ಹೆಸರು… ಆ ಒಂದು ಹೆಸರು… ನೋಡಿದ ತಕ್ಷಣವೇ ಪ್ರತಿಯೊಬ್ಬರ ನಾಲಗೆ ಮೇಲೆ ನಲಿದಾಡುವಂತಹ ಹೆಸರು…!
ಆ ಹೆಸರೇ… ಮಹೇಂದ್ರ ಸಿಂಗ್ ಧೋನಿ . ಎಂ.ಎಸ್. ಧೋನಿ.. ಎಂಎಸ್ಡಿ… ಇದು ಬರೀ ಹೆಸರಲ್ಲ. ಯಾಕಂದ್ರೆ ಈ ಹೆಸರಿನಲ್ಲಿದೆ ಆಗಾಧವಾದ ಶಕ್ತಿ… ಇದರಲ್ಲಿದೆ ಯಾರೂ ಊಹೆ ಮಾಡದಂತಹ ಯುಕ್ತಿ.. ಆ ಹೆಸರಿನಿಂದಲೇ ಸಿಗುತ್ತಿದೆ ಸದಾ ಸ್ಪೂರ್ತಿ… ಕ್ರಿಕೆಟ್ ಅಭಿಮಾನಿಗಳಿಗೆ ಆ ಹೆಸರಿನ ಮೇಲಿದೆ ಅಚ್ಚಳಿಯದ ಪ್ರೀತಿ… ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುತ್ತಿದೆ ಆ ಹೆಸರಿನ ಕೀರ್ತಿ.
ಜುಲೈ ಅಂದ್ರೆ ತಿಂಗಳ ಸಂಖ್ಯೆ 7… ಹುಟ್ಟಿದ್ದ ದಿನಾಂಕ ಜುಲೈ -7… ಜೆರ್ಸಿ ನಂಬರ್ 7… ಅಂದ ಹಾಗೇ ನಂಬರ್ -7… ಇದು ಮಹೇಂದ್ರ ಸಿಂಗ್ ಧೋನಿಯವರ ಟ್ರೆಡ್ ಮಾರ್ಕ್… ಮಾಡೆಲ್ ನಂಬರ್ 1981. ಅಂದ್ರೆ ಈಗ ಧೋನಿಗೆ 39ರ ಪ್ರಾಯ. ಟೀಮ್ ಇಂಡಿಯಾದ ಗರ್ಭಗುಡಿ ಪ್ರವೇಶಿಸಿ ಸರಿ ಸುಮಾರು 16 ವರ್ಷಗಳಾಗಿವೆ. ಆದ್ರೆ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ದೂರವೇ ಇದ್ದಾರೆ. ಗೂಟ ರಕ್ಷಕನಾಗಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಎಂಎಸ್ಡಿ, ಸ್ಫೋಟಕ ಬ್ಯಾಟಿಂಗ್ ಮೂಲಕವೂ ಮಿಂಚು ಹರಿಸಿದ್ರು. ಟೀಮ್ ಇಂಡಿಯಾವನ್ನು ಸೇರಿ ಮೂರೇ ಮೂರು ವರ್ಷಗಳಲ್ಲಿ ನಾಯಕನಾಗಿ ಬಡ್ತಿ ಪಡೆದಿದ್ದ ಧೋನಿ, ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದ್ದರು.
ನಂತರ ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಯಶಸ್ಸಿನ ಅಲೆಯಲ್ಲಿ ತೇಲಾಡಿಸಿದ್ರು. 2011ರ ವಿಶ್ವಕಪ್ ಫೈನಲ್ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. ಗೆಲುವಿನ ರನ್ ಗಾಗಿ ಆಕರ್ಷಕ ಸಿಕ್ಸರ್ ಸಿಡಿಸಿದ್ರು. ಆಗಸದೆತ್ತರದಲ್ಲಿ ಹಾರಾಡುತ್ತಿದ್ದ ಚೆಂಡು ಸೀದಾ ಪ್ರೇಕ್ಷಕರ ಗ್ಯಾಲರಿಯತ್ತ ಬೀಳುತ್ತಿರುವ ಕ್ಷಣವನ್ನು ತನ್ನ ತೀಕ್ಷ್ಣ ಕಣ್ಣಿನಿಂದ ನೋಡುತ್ತಿದ್ದ ಆ ಕ್ಷಣ… ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದರು ಧೋನಿ
ಇನ್ನು ಐಪಿಎಲ್ನಲ್ಲಂತೂ ಧೋನಿಯ ಮ್ಯಾಜಿಕ್ ಅನ್ನು ಕೇಳುವುದೇ ಬೇಡ. ತನ್ನ ಸ್ಫೋಟಕ ಆಟ, ಚಾಣಕ್ಯ ನಾಯಕತ್ವ, ತಾಳ್ಮೆಯಿಂದಲೇ ಎಲ್ಲವನ್ನು ಸಹಿಸಿಕೊಂಡು ತಂಡವನ್ನು ಮುನ್ನಡೆಉವ ರೀತಿ… ಕ್ಷಣ ಮಾತ್ರದಲ್ಲೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಮಾಸ್ಟರ್ ಮೈಂಡ್. ಆಟದ ಜೊತೆ ಫ್ಯಾಷನ್.. ಫ್ಯಾಷನ್ ಜೊತೆ ಸ್ಟೈಲ್, ದೇಶಾಭಿಮಾನ.. ಸೈನಿಕರ ಮೇಲಿನ ಗೌರವ…. ಹೀಗೆ ಮುಗುಳುನಗೆಯಿಂದಲೇ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವದಿಂದ ಧೋನಿ ಮನೆ ಮನೆ ಮಾತಾಗಿದ್ದಾರೆ.
ಇದೀಗ ಧೋನಿ ಕ್ರಿಕೆಟ್ ಬದುಕು ತೂಗ್ಯೂಯ್ಯಾಲೆಯಲ್ಲಿದೆ. ಐಪಿಎಲ್ ನಲ್ಲಿ ಆಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆ ಮೂಲಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು 2020ರ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಆಡುವ ಕನಸು ಕಾಣುತ್ತಿದ್ದರು. ಆದ್ರೆ ಕೊರೋನಾ ವೈರಸ್ ಧೋನಿಯವರ ಕನಸುಗಳನ್ನು ಭಗ್ನಗೊಳಿಸಿದೆ. ಆದ್ರೂ ಧೋನಿ ತನ್ನ ಕಟ್ಟಕಡೆಯ ಪಂದ್ಯವನ್ನು ಆಡುವ ಮೂಲಕ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಯೋಚನೆಯಲ್ಲಿದ್ದಾರೆ.
ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಧೋನಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸೈನಿಕರ ಜೊತೆಗೂ ಕಾಲ ಕಳೆದಿರುವ ಧೋನಿ ಸದ್ಯ ರಾಂಚಿಯ ತನ್ನ ಫಾರ್ಮ್ ಹೌಸ್ನಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ, ತನ್ನ ಫಾರ್ಮ್ ಹೌಸ್ ನಲ್ಲಿ ಕೃಷಿಯನ್ನೂ ಮಾಡುತ್ತಿದ್ದಾರೆ.
ಇಂದು ಅಂದ್ರೆ ಜುಲೈ7.. ಧೋನಿಯವರು ತನ್ನ 39ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳು, ಟೀಮ್ ಇಂಡಿಯಾದ ಹಾಲಿ, ಮಾಜಿ ಕ್ರಿಕೆಟಿಗರು, ಬೇರೆ ಬೇರೆ ದೇಶಗಳ ಕ್ರಿಕೆಟಿಗರು, ಕ್ರೀಡಾಟಪಟುಗಳು ಸೇರಿದಂತೆ ಕೋಟ್ಯಂತರ ಜನರು ಧೋನಿಗೆ ಹುಟ್ಟು ಹಬ್ಬದ ಹಾರೈಕೆಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಧೋನಿ ವಿಕೆಟ್ ಹಿಂದುಗಡೆ ಮಾಡುತ್ತಿದ್ದ ಕೈಚಳಕ, ಮ್ಯಾಜಿಕ್ ಸ್ಟಂಪ್ಗಳು, ಗೇಮ್ ಚೆಂಜಿಂಗ್ ಚಾಣಕ್ಷತನ, ಬ್ಯಾಟಿಂಗ್ ಮಾಡುತ್ತಿರುವ ಗತ್ತು,, ಗಾಂಭೀರ್ಯ, ಗ್ರೇಟ್ ಮ್ಯಾಚ್ ಫೀನಿಶರ್… ಗ್ಲ್ಯಾಂಬರ್… ಎಲ್ಲವೂ ಕ್ರಿಕೆಟ್ ಬದುಕಿನ ನೆನಪುಗಳಷ್ಟೇ..
ಯಾಕಂದ್ರೆ ಧೋನಿ ಇನ್ನೂ ಹೆಚ್ಚು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡುವುದು ಅನುಮಾನ. ಆಡುವ ಮನಸ್ಸು ಇದ್ರೂ ದೇಹ ಸ್ಪಂದಿಸಬೇಕಲ್ವಾ .. ಆದ್ರೆ ಒಂದಂತೂ ಸತ್ಯ.. ಧೋನಿಗೆ ಯಾವಾಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕು ಎಂಬುದು ಗೊತ್ತು… ಅದು ಕೂಡ ಅರ್ಥಪೂರ್ಣವಾಗಿಯೇ ವಿದಾಯ ಹೇಳ್ತಾರೆ ಎಂಬ ನಂಬಿಕೆಯೂ ಇದೆ. ಎನೀ ವೇ.. ಹ್ಯಾಪಿ ಬರ್ತ್ ಡೇ ಎಂಎಸ್ಡಿ…!