ಬೆಂಗಳೂರು: ಗಡಿಯಲ್ಲಿ ಚೀನಾ ಸೇನೆ ಎರಡು ಕಿ.ಮೀ ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ದೇಶದ ಪ್ರಧಾನ ಮಂತ್ರಿಗಳು. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ ಎನ್ನುವುದನ್ನೂ ತಿಳಿಸಲಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಬಿ.ಎಲ್.ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದಿದ್ದಾರೆ ಎಂದು ಟ್ವಿಟರ್‌ನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಫೋಟೋ ಹಾಕಿ ತಿರುಗೇಟು ನೀಡಿದ್ದಾರೆ.








