ಬೆಂಗಳೂರು : ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್ ಲೈನ್ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್ ಲೈನ್ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಎಂಬುದನ್ನು #ಮತ್ತೊಮ್ಮೆ ಸ್ಪಷ್ಟಗೊಳಿಸುತ್ತಿದ್ದೇನೆ. ಇದನ್ನು ನಾನು ಹಲವಾರು ಬಾರಿ ಸ್ಪಷ್ಟಪಡಿಸಿದ್ದೇನೆ. ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯಗಳನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಜನೆಯ ಪರ ಕೈಗೊಳ್ಳಲು ಸಮರ್ಥವಾಗಿದೆ ಮತ್ತು ಅಂಥ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಪಾಲಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಕುರಿತು ಯಾವುದೇ ಆತಂಕ ಅಥವಾ ಕಪೋಲ ಕಲ್ಪಿತ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ. ಸರ್ಕಾರ ತಾನಾಗಿಯೇ ಯಾವುದೇ ನಿರ್ಣಯ ಅಧಿಕೃತವಾಗಿ ಪ್ರಕಟಿಸುವ ಮುನ್ನ ಮಾಧ್ಯಮದಲ್ಲಿ ಪ್ರಸಾರವಾಗುವ ಅಥವಾ ಪ್ರಕಟವಾಗುವ ಯಾವುದೇ ಸುದ್ದಿಯನ್ನು ನಿಜ ಎಂದು ನಂಬಬೇಡಿ. ತಜ್ಞರ ಸಮಿತಿ ವರದಿ ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸರ್ಕಾರದ ಹಂತದಲ್ಲಿ ನಡೆಯುವ ಚರ್ಚೆಗಳು ಎಂದಿಗೂ ಅಂತಿಮ ನಿರ್ಣಯವಾಗಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.