ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ಬಿಮಾ ಸಖಿ’ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಉದ್ದೇಶ ಭಾರತೀಯ ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸ್ವಾಯತ್ತತೆ ಮತ್ತು ಉದ್ಯೋಗಾವಕಾಶ ಒದಗಿಸುವುದಾಗಿದೆ. ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಎಲ್ಐಸಿಯ (LIC) ಮಾರ್ಗಸೂಚಿಯಡಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ
ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸ್ಥಿರತೆ ನೀಡುವುದು ಮತ್ತು ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಬಿಮಾ ಸಖಿ ಯೋಜನೆಯಡಿ, ಮೊದಲ ವರ್ಷದಲ್ಲಿ ಭಾಗವಹಿಸುವ ಮಹಿಳೆಯರು ಮಾಸಿಕ 7,000 ರೂ.ಗಳಷ್ಟು ಗಳಿಸಬಹುದಾಗಿದೆ.
ಮೊದಲ ವರ್ಷ: ಪ್ರಾರಂಭಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಮಹಿಳೆಯರು ಮಾಸಿಕ 7,000 ರೂ. ಗಳಿಸುವ ಅವಕಾಶವನ್ನು ಪಡೆಯುತ್ತಾರೆ.
ಎರಡನೇ ವರ್ಷ: ಮಹಿಳೆಯರು ಕ್ರಮೇಣ ಸ್ವಾವಲಂಬಿಯಾಗುವುದರಿಂದ, ಅವರಿಗೆ ಮಾಸಿಕ 6,000 ರೂ.ಗಳಂತೆ ಸಂಬಳ ನೀಡಲಾಗುತ್ತದೆ.
ಮೂರನೇ ವರ್ಷ: ಮಹಿಳೆಯರು 5,000 ರೂ. ಗಳಿಸಲು ಅವಕಾಶ ಪಡೆಯುತ್ತಾರೆ, ಇದು ನೇರವಾಗಿ ಅವರ ವಿಮಾ ಮಾರಾಟ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ.
ಕಮಿಷನ್ ಆಧಾರಿತ ಪ್ರೋತ್ಸಾಹ
ಮಹಿಳೆಯರು ತಮ್ಮ ವಿಮಾ ಮಾರಾಟ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿದರೆ, 2,100 ರೂ. ಕಮಿಷನ್ ಆಧಾರಿತ ಪ್ರತಿಫಲಗಳನ್ನು ಪಡೆಯಬಹುದು. ಇದು ಅತಿ ಹೆಚ್ಚು ಕಾರ್ಯನಿರ್ವಹಣೆ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ವ್ಯವಸ್ಥೆಯಾಗಿದೆ. ತರಬೇತಿ ಹಾಗೂ ಮಾರಾಟ ತಂತ್ರಜ್ಞಾನದಲ್ಲಿ ಪರಿಣಿತತೆಯನ್ನು ಪಡೆಯಲು ಮಹಿಳೆಯರಿಗೆ ವಿಶೇಷ ಅವಕಾಶಗಳನ್ನು ನೀಡಲಾಗುತ್ತದೆ.
ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ
‘ಬಿಮಾ ಸಖಿ’ ಯೋಜನೆ ಮಹಿಳೆಯ ಆರ್ಥಿಕ ಸ್ವಾವಲಂಬನೆಯತ್ತ ಮಹತ್ತರ ಹೆಜ್ಜೆಯಾಗಿದ್ದು, ಇಡೀ ಗ್ರಾಮೀಣ ಸಮುದಾಯದ ಬದಲಾವಣೆಯ ಭರವಸೆಯನ್ನು ನೀಡುತ್ತದೆ.
ಈ ಹೊಸ ಯೋಜನೆಯು ಮಹಿಳೆಯರು ತಮ್ಮ ಕೌಟುಂಬಿಕ ಹೊಣೆಗಾರಿಕೆಗಳನ್ನು ನಿರ್ವಹಿಸುವ ಜೊತೆಗೆ, ತಮ್ಮ ಜೀವನಮಟ್ಟವನ್ನು ಎತ್ತರಿಸಲು ಉತ್ತಮ ವೇದಿಕೆಯಾಗಲಿದೆ.








