ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಅಲಿಯಾಸ್ ಎನ್ ಪಿ ಎಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಅಥವಾ ಒಪಿಎಸ್ ಅನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಲಕ್ಷಾಂತರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೇಂದ್ರ ಮಾದರಿ ವೇತನ ಮತ್ತು ಭತ್ಯೆಗಳನ್ನು ನೀಡಬೇಕೆಂದು ಅವರು ಈ ಪತ್ರದ ಮೂಲಕ ಬಲವಾದ ಬೇಡಿಕೆ ಮಂಡಿಸಿದ್ದಾರೆ.
ರಾಜ್ಯದ 5.25 ಲಕ್ಷ ಸರ್ಕಾರಿ ನೌಕರರು ಹಾಗೂ ಸುಮಾರು 25 ಲಕ್ಷ ನೌಕರರ ಕುಟುಂಬಗಳನ್ನು ಪ್ರತಿನಿಧಿಸುವ ಈ ಸಂಘಟನೆಯು, ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿದೆ. ಷಡಕ್ಷರಿ ಅವರು ಸಲ್ಲಿಸಿರುವ ಈ ಪತ್ರದ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದು ನೌಕರರಲ್ಲಿ ಹೊಸ ಆಸೆ ಮೂಡಿಸಿದೆ.
ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ನೌಕರರು ನಿಂತಿದ್ದನ್ನು ಪತ್ರದಲ್ಲಿ ನೆನಪಿಸಲಾಗಿದೆ. ಪ್ರವಾಹ, ಬರಗಾಲ ಹಾಗೂ ಕೋವಿಡ್ ನಂತಹ ತುರ್ತು ಸಂದರ್ಭಗಳಲ್ಲಿ ಸರ್ಕಾರಿ ನೌಕರರು ತಮ್ಮ ವೇತನ ಹಾಗೂ ತುಟ್ಟಿಭತ್ಯೆಯನ್ನು ಬಿಟ್ಟುಕೊಡುವ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ನೆರವು ನೀಡಿದ್ದಾರೆ. ಸುಮಾರು 2.75 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಇರುವ ನೌಕರರೇ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತಿದ್ದಾರೆ. ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನಕ್ಕೇರಲು ನೌಕರರ ಶ್ರಮವೇ ಕಾರಣ ಎಂದು ಷಡಕ್ಷರಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 2.80 ಲಕ್ಷ ನೌಕರರು ಎನ್ ಪಿ ಎಸ್ ವ್ಯಾಪ್ತಿಯಲ್ಲಿದ್ದಾರೆ. ಈಗಾಗಲೇ ಪಂಜಾಬ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಒಪಿಎಸ್ ಮರು ಜಾರಿಯಾಗಿದೆ. ಕರ್ನಾಟಕ ಸರ್ಕಾರ ಕೂಡ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಒಪಿಎಸ್ ಅನ್ನು ಜಾರಿಗೆ ತರಬೇಕು. ಈ ಕುರಿತು ರಚಿಸಲಾಗಿರುವ ಸಮಿತಿಯು ಈಗಾಗಲೇ ವರದಿ ಸಿದ್ಧಪಡಿಸಿದ್ದು, ಅದನ್ನು ಕೂಡಲೇ ಪಡೆದು ಜಾರಿಗೆ ತರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಕೇಂದ್ರ ಮಾದರಿ ವೇತನಕ್ಕೂ ನೌಕರರು ಆಗ್ರಹಿಸಿದ್ದಾರೆ. ಈಗಾಗಲೇ 22ಕ್ಕೂ ಹೆಚ್ಚು ರಾಜ್ಯಗಳು ಕೇಂದ್ರಕ್ಕೆ ಸಮಾನವಾದ ವೇತನ ನೀಡುತ್ತಿವೆ. ರಾಜ್ಯ 7ನೇ ವೇತನ ಆಯೋಗ ಕೂಡ ಕೇಂದ್ರ ಮಾದರಿ ವೇತನ ನೀಡಲು ಶಿಫಾರಸ್ಸು ಮಾಡಿದೆ. ನುಡಿದಂತೆ ನಡೆಯುವ ಸರ್ಕಾರವು ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತಂದು ನೌಕರರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಸಿ ಎಸ್ ಷಡಕ್ಷರಿ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ನೌಕರರ ಸಮೂಹದ ಬೇಡಿಕೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.








