ಬೆಂಗಳೂರು : ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಸಂಸದ ಪ್ರತಾಪ್ ಸಿಂಹ ಅವರು ಟ್ವಿಟ್ಟರ್ ಕುಟುಕಿದ್ದಾರೆ.
ಚೀನಾ ವಿಚಾರದ ಬಗ್ಗೆ ಮಾತನಾಡಲು ಸಂತೋಷ್ ಯಾರು ಸಂತೋಷ್ ಅವರು ಸಿಎಂ ಯಡಿಯೂರಪ್ಪಗೆ ಶಹಭಾಸ್ ಗಿರಿ ನೀಡಿದ್ದು ಮನಸ್ಸಿನಿಂದಲೋ ಇಲ್ಲ ನಾಲಿಗಿಯಿಂದಲೋ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, “ಮನಸ್ಸಲ್ಲೊಂದು ನಾಲಿಗೆ ಮೇಲೊಂದು ಇಟ್ಕೋಳೋಕೆ ಸಂತೋಷ್ ಜಿಯೇನು ನೀವಾ? 2006ಕ್ಕಿಂತ ಮುಂಚೆ ಯಾರನ್ನು ಸಭೆ ಸಮಾರಂಭಗಳಲ್ಲಿ ಅವಳು, ಇವಳು ಅಂತ ಏಕವಚನದಲ್ಲಿ ಹೀಗಳೆಯುತಿದ್ದಿರೋ ಅದೇ ಸೋನಿಯಾ ಗಾಂಧಿಯವರನ್ನು ಅಧಿನಾಯಕಿ ಎಂದು ಒಪ್ಪಿಕೊಂಡಿರೋ ನೀವಷ್ಟೇ ಮನಸ್ಸು ಮತ್ತು ನಾಲಗೆಯಲ್ಲಿ ಬೇರೆ ಬೇರೆ ಇಟ್ಟುಕೊಳ್ಳಲು ಸಾಧ್ಯ ಸಾರ್ ಎಂದು ಕಾಲೆಳೆದಿದ್ದಾರೆ.
ಎರಡನೇ ಟ್ವೀಟ್ ನಲ್ಲಿ ಲಾಕ್ ಡೌನ್ ಬಗ್ಗ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ ಗೆ ತಿರುಗೇಟು ಕೊಟ್ಟಿರುವ ಪ್ರತಾಪ್,”ಬಾಸೂ, ನಿಮ್ಮ ಕಾಂಗ್ರೆಸ್ 55 ವರ್ಷ ದೇಶವಾಳಿದರೂ ಕೊರೋನಾ ಬಂದಾಗ ದೇಶದಲ್ಲಿ ಇದ್ದಿದ್ದು ಬೆರಳೆಣಿಕೆಯ ಟೆಸ್ಟಿಂಗ್ ಲ್ಯಾಬ್‌ಗಳು, ವೆಂಟಿಲೇಟರ್ ಗಳು, ಪಿಪಿಇ ಕಿಟ್ ಗಳನ್ನಂತೂ ಹುಡುಕಬೇಕಿತ್ತು. ಲಾಕ್ ಡೌನ್ ಅವಧಿಯಲ್ಲಿ ಇವೆಲ್ಲವನ್ನೂ ಸರಿಪಡಿಸಿ, ಸೋಂಕಿತರ ಸಂಖ್ಯೆ ಎಷ್ಟೇ ಹೆಚ್ಚಾದರೂ ನಿಭಾಯಿಸುವ ಸಾಮರ್ಥ್ಯವನ್ನು ದೇಶ ಹೊಂದುವಂತೆ ಮಾಡಲಾಗಿದೆ ಎಂದು ಟಾಂಗ್ ನೀಡಿದ್ದಾರೆ.
ಮೂರನೇ ಟ್ವೀಟ್ ನಲ್ಲಿ, ಎಂಥದೇ ಆಗಿರಲಿ ನಿಮಗೆ ಧನ್ಯವಾದ ಬಾಸ್. ನಿಮ್ಮ ಸರಣಿ ಟ್ವೀಟ್ ಗಳನ್ನು ನೋಡಿದರೆ ನಾವು ಮಾತ್ರವಲ್ಲ ನೀವೂ ಬಿಎಲ್ ಸಂತೋಷ್ ಜೀ ಅವರ ಭಾಷಣದ ಫ್ಯಾನು ಅಂತಾ ಗೊತ್ತಾಯ್ತು ಎಂದು ಬರೆದುಕೊಂಡಿದ್ದಾರೆ ಪ್ರತಾಪ್ ಸಿಂಹ.








