ಬೆಂಗಳೂರು: ಐಶ್ವರ್ಯ ಗೌಡ ಕೇಸ್ನಲ್ಲಿ (Aishwarya Gowda Case) ನಿಖಿಲ್, ಅನಿತಾ ಕುಮಾರಸ್ವಾಮಿ ಹೆಸರು ಪ್ರಸ್ತಾಪವಾಗುತ್ತಿರುವುದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಡೆಯುತ್ತಿದೆ. ನಿಖಿಲ್, ಅನಿತಾ ಕುಮಾರಸ್ವಾಮಿ ಪರಿಚಯ ಅಂತ ಹೇಳಿ ನಿನ್ನೆ ಮೊನ್ನೆಯಿಂದ ಸುದ್ದಿ ಬರುತ್ತಿದೆ. ಐಶ್ವರ್ಯಗೌಡ, ಯಾವಾಗ ಭೇಟಿ ಮಾಡಿದ್ದರು? ಎಂಬುವುದರ ಕುರಿತು ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಎಂಬುವುದು ಗೊತ್ತಿದೆ.
2016ರಲ್ಲಿ ದೂರು ಕೊಟ್ಟಿರೋದು, ವ್ಯವಹಾರ ನಡೆದಿರೋದು. ನಿಖಿಲ್, ಅನಿತಾ ಹೆಸರನ್ನು ಇದರಲ್ಲಿ ಎಳೆದಿದ್ದಾರೆ ಅಂತ ಮಾಹಿತಿ ತರಿಸಿದ್ದೇನೆ. ಈ ಸರ್ಕಾರ ಯಾರನ್ನು, ಯಾವಾಗ, ಏನು ಬೇಕಾದ್ರು ಮಾಡುತ್ತಾರೆ. ಸರ್ಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. 2016ರಲ್ಲಿ ಪ್ರಕರಣ ಆಗಿರೋದು. 2018ರಲ್ಲಿ ನಾನೇ ಸಿಎಂ ಇದ್ದೆ. ಆಗ ಯಾಕೆ ನನ್ನ ಬಳಿ ಅನ್ಯಾಯ ಅಂತ ಯಾರೂ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








