ಬೆಂಗಳೂರು: ಸರಕಾರದ ಕೆಲಸ ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ವಿಪಕ್ಷ ನಾಯಕರು, ಸಿಎಂಗೆ ನನ್ನ ಮನವಿ, ಇಬ್ಬರು ಆರೋಪ-ಪ್ರತ್ಯಾರೋಪ ಮಾಡೋದು ಬಿಟ್ಟು ಜನ ಪರ ಕೆಲಸ ಮಾಡಿ. ಸಿಎಂ ಕೂಡ ಕೆಲ ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರಿದೆ ಅಂತ ಹೇಳಿದ್ದಾರೆ. ಜನ ಇದನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ, ಕಳೆದ 3 ತಿಂಗಳಿಂದ ಕೇವಲ ಸಭೆ ಮತ್ತು ಮಾತಿಗೆ ಮಾತ್ರ ನಿಮ್ಮ ಆಡಳಿತ ಸೀಮಿತವಾಗಿದೆ. ಈಗಾಲಾದರೂ ಎಲ್ಲಿ ಲೋಪ ಆಗಿದೆ ಅಂತ ತಿಳಿದುಕೊಂಡು ಅದನ್ನು ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇನ್ನು ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ಅಂತ ವಿಪಕ್ಷ ನಾಯಕರು ಆರೋಪ ಮಾಡಿದ್ದಾರೆ. ಮತ್ತೆ ಇಂತಹ ಆರೋಪ ಕೇಳಿ ಬರಬಾರದು. ಇದಕ್ಕಾಗಿ ವಿಪಕ್ಷ ನಾಯಕರನ್ನು ಕೋವಿಡ್ ಸಭೆ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಸೇರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಕುಮಾರಸ್ವಾಮಿ, ನಮ್ಮ ಪಕ್ಷದಿಂದ ನಾವು ಯಾವುದೇ ಆರೋಪ ಮಾಡೋಲ್ಲ, ನಮಗೆ ನಂಬಿಕೆ ಇದೆ ಜನರ ಹಣ ದುರುಪಯೋಗ ಆಗೋಲ್ಲ ಅಂತಾ ಹೀಗಾಗಿ ನಮ್ಮ ಪಕ್ಷದಿಂದ ಆರೋಪ ಮಾಡೋಲ್ಲ ಎಂದು ಹೇಳಿದರು.








