ಅಯೋಧ್ಯೆ: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ರಾಮನ ಪಾದಕ್ಕೆ ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ಹಣವನ್ನು ದೇವಸ್ಥಾನದ ನಂಬಿಕಸ್ಥ ಸಿಬ್ಬಂದಿಯೇ ವ್ಯವಸ್ಥಿತವಾಗಿ ಲೂಟಿ ಮಾಡಿರುವುದು ವಿಶೇಷ ತನಿಖಾ ತಂಡದ (SIT) ತನಿಖೆಯಲ್ಲಿ ಸಾಬೀತಾಗಿದೆ.
ಬಡ ನೌಕರರು ಈಗ ಕುಬೇರರು
ದೇವಸ್ಥಾನದಲ್ಲಿ ದೇಣಿಗೆ ಎಣಿಕೆ ಕಾರ್ಯಕ್ಕಾಗಿ ನೇಮಕಗೊಂಡಿದ್ದ ಸಿಬ್ಬಂದಿಯ ಮಾಸಿಕ ವೇತನ ಕೇವಲ 14 ರಿಂದ 15 ಸಾವಿರ ರೂಪಾಯಿಗಳು. ಆದರೆ ತನಿಖೆಯ ವೇಳೆ ಈ ನೌಕರರ ಬಳಿ ಐಷಾರಾಮಿ ಬಂಗಲೆಗಳು, ಬೆಲೆಬಾಳುವ ಎಸ್‌ಯುವಿ ಕಾರುಗಳು ಮತ್ತು ಎಕರೆಗಟ್ಟಲೆ ಜಮೀನು ಇರುವುದು ಪತ್ತೆಯಾಗಿದೆ. ಕೇವಲ ಕೆಲವೇ ದಿನಗಳಲ್ಲಿ ಸಾಮಾನ್ಯ ಕೆಲಸಗಾರರ ಆರ್ಥಿಕ ಸ್ಥಿತಿಯಲ್ಲಿ ದಿಢೀರ್ ಉಂಟಾದ ಈ ಭಾರಿ ಏರಿಕೆ ಕಂಡು ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ವಿಶೇಷವಾಗಿ ಕುಂಭಮೇಳದ ಸಂದರ್ಭದಲ್ಲಿ ಬಂದ ಭಾರಿ ಮೊತ್ತದ ಕಾಣಿಕೆಯನ್ನು ಈ ತಂಡ ಸಾರಾಸಗಟಾಗಿ ಲೂಟಿ ಮಾಡಿದೆ.
ಸಿಸಿಟಿವಿಯಲ್ಲಿ ಬಯಲಾದ ಖತರ್ನಾಕ್ ಕಳ್ಳತನ
ದೇವಸ್ಥಾನದ ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿಗೆ ಜೇಬಿಲ್ಲದ ಬಟ್ಟೆ ಧರಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿತ್ತು. ಆದರೆ ಅದನ್ನು ಗಾಳಿಗೆ ತೂರಿದ ಆರೋಪಿಗಳು, ನೋಟುಗಳ ಕಂತೆಗಳನ್ನು ತಮ್ಮ ಸಾಕ್ಸ್ ಮತ್ತು ಗುಪ್ತ ಜೇಬುಗಳಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದರು. ಬಳಿಕ ಈ ಹಣವನ್ನು ದೇವಸ್ಥಾನದ ಶೌಚಾಲಯಗಳಲ್ಲಿ ಬಚ್ಚಿಟ್ಟು, ದಿನದ ಅಂತ್ಯದಲ್ಲಿ ಗುಟ್ಟಾಗಿ ಹೊರಗೆ ಸಾಗಿಸುತ್ತಿದ್ದರು. ಈ ಕಿರಾತಕರ ಎಲ್ಲಾ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಐವರು ನೌಕರರ ಕರಾಳ ಮುಖ ಅನಾವರಣಗೊಂಡಿದೆ.
ದಿನಕ್ಕೆ 8 ಲಕ್ಷದವರೆಗೂ ಲೂಟಿ
ತನಿಖಾ ತಂಡವು ಬ್ಯಾಂಕ್ ವ್ಯವಹಾರಗಳ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಅಕ್ರಮದ ಆಳ ಬಯಲಾಗಿದೆ. ಈ ಹಗರಣ ಪತ್ತೆಯಾಗುವ ಮುನ್ನ ದೇವಸ್ಥಾನದ ಬ್ಯಾಂಕ್ ಖಾತೆಗೆ ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂಪಾಯಿ ಮಾತ್ರ ಜಮೆಯಾಗುತ್ತಿತ್ತು. ಆದರೆ ಅಕ್ರಮ ಪತ್ತೆಯಾಗಿ ತನಿಖೆ ಆರಂಭವಾದ ಕೂಡಲೇ ಈ ಮೊತ್ತ ದಿನಕ್ಕೆ 26 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇದರ ಆಧಾರದ ಮೇಲೆ, ಆರೋಪಿಗಳು ಪ್ರತಿದಿನ ದೇವಸ್ಥಾನಕ್ಕೆ ಬರುವ ಹಣದಲ್ಲಿ ಕನಿಷ್ಠ 6 ರಿಂದ 8 ಲಕ್ಷ ರೂಪಾಯಿಗಳನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದರು ಎಂದು ಅಂದಾಜಿಸಲಾಗಿದೆ. ನಗದು ಮಾತ್ರವಲ್ಲದೆ ಭಕ್ತರು ನೀಡಿದ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳಿಗೂ ಇವರು ಕನ್ನ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಈ ಹಿಂದೆ ರಸ್ತೆ ಬದಿಯಲ್ಲಿ ಕುಡಿಯುವ ನೀರು ಮಾರುತ್ತಿದ್ದವನು, ಈಗ ಅಯೋಧ್ಯೆಯಲ್ಲಿ ಬೃಹತ್ ಬಂಗಲೆ ಕಟ್ಟುತ್ತಿದ್ದಾನೆ. ಚಾಲಕನಾಗಿದ್ದ ರಾಮಶಂಕರ್ ಯಾದವ್ ಎಂಬಾತ ಇಂದು ಬೃಹತ್ ಹಾಸ್ಟೆಲ್ ಮಾಲೀಕನಾಗಿದ್ದಾನೆ. ಮತ್ತೊಬ್ಬ ಆರೋಪಿ ಲವ್‌ಕುಶ್ ಮಿಶ್ರಾ ಸುಳ್ಳು ದಾಖಲೆಗಳ ಮೂಲಕ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಮೀನು ಖರೀದಿ ಮಾಡಿದ್ದಾನೆ. ಸದ್ಯ ಎಸ್‌ಐಟಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳ ಕುಟುಂಬಸ್ಥರಿಗೂ ನೋಟಿಸ್ ಜಾರಿ ಮಾಡಿದ್ದಾರೆ. ರಾಮನ ಹೆಸರಲ್ಲಿ ನಡೆದ ಈ ಮಹಾ ವಂಚನೆ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.








