ಮಂಡ್ಯ: ವಕ್ಫ್ (Waqf Board) ಬೋರ್ಡ್ ವಿರುದ್ಧ ಇಂದು ರೈತರು ಬೀದಿಗೆ ಇಳಿದಿದ್ದಾರೆ. ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ (RTC) ವಕ್ಫ್ ಬೋರ್ಡ್ ಹೆಸರು ನಮೂದಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರೈತರು ಮತ್ತು ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣ (Srirangapatna) ಬಂದ್ ಗೆ ಕರೆ ನೀಡಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ವಕ್ಫ್ ಬೋರ್ಡ್ ಆತಂಕ ಸೃಷ್ಟಿಸಿದೆ. ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಅಧಿಕ ರೈತರ ಆರ್ ಟಿಸಿಯಲ್ಲಿ ರಾಜ್ಯ ವಕ್ಫ್ ಮಂಡಳಿ ಎಂದು ನಮೂದಾಗಿದೆ. ಹೀಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ರೈತರ ಜಮೀನು ಅಲ್ಲದೇ, ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್ ವಕ್ರ ಕಣ್ಣು ಬಿದ್ದಿದೆ. ಹೀಗಾಗಿ ರೈತರು ಬೀದಿಗೆ ಇಳಿದಿದ್ದಾರೆ. ವಕ್ಫ್ ಬೋರ್ಡ್ ಗೋಲ್ ಮಾಲ್ ಖಂಡಿಸಿ ಇಂದು ಶ್ರೀರಂಗಪಟ್ಟಣ ಟೌನ್ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ರವರೆಗೆ ಬಂದ್ ನಡೆಸಲು ವಿಶ್ವ ಹಿಂದೂ ಪರಿಷತ್, ಭಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಹಾಗೂ ರೈತರು ಮನವಿ ಮಾಡಿದ್ದಾರೆ.








