ಬೆಂಗಳೂರು: ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನುವ ಗಾದೆಗೆ ಪ್ರಧಾನಿ ನರೇಂದ್ರ ಮೋದಿಯೇ ಜೀವಂತ ಉದಾಹರಣೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದ ಭಾವುಕ ವಿಡಿಯೋವೊಂದಕ್ಕೆ ತಿರುಗೇಟು ನೀಡಿರುವ ಅವರು, ಮೋದಿಯವರ ನಡೆ ಬರೀ ಬೂಟಾಟಿಕೆ ಮತ್ತು ಹಸಿ ಸುಳ್ಳು ಎಂದು ಟೀಕಿಸಿದ್ದಾರೆ.
ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದವರನ್ನು ಕ್ಷಮಿಸಿದ್ದೇನೆ ಎಂದು ಮೋದಿ ಹೇಳಿರುವುದು ಒಂದು ಭಾವುಕ ಅಭಿನಯ ಎಂದು ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ದಶಕಗಳ ಕಾಲ ವಿರೋಧ ಪಕ್ಷದ ಮಹಿಳಾ ನಾಯಕರನ್ನು ತುಚ್ಛವಾಗಿ ಜರಿದು, ಅವರ ಕುಟುಂಬದ ಮೇಲಿನ ನಿಂದನೆಯನ್ನು ಮೌನವಾಗಿ ಬೆಂಬಲಿಸಿದವರು ಇಂದು ಮಾತೃಗೌರವದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗೆ ನಿಮ್ಮ ವರ್ತನೆ ಇದೆ ಎಂದು ಅವರು ಗುಡುಗಿದ್ದಾರೆ.
ಗಾಂಧಿ ಕುಟುಂಬದ ಸಂಸ್ಕಾರವನ್ನು ನೆನಪಿಸಿದ ಹರಿಪ್ರಸಾದ್
ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರನ್ನು ಭೀಕರವಾಗಿ ಕಳೆದುಕೊಂಡ ನೋವಿದ್ದರೂ, ರಾಹುಲ್ ಗಾಂಧಿ ಅವರು ತಮಗೆ ಯಾರ ಮೇಲೂ ದ್ವೇಷವಿಲ್ಲ, ಎಲ್ಲರನ್ನೂ ಕ್ಷಮಿಸಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ತಮ್ಮ ತಂದೆಯ ಹಂತಕಿಯನ್ನೇ ಜೈಲಿನಲ್ಲಿ ಭೇಟಿ ಮಾಡಿ ಮಾನವೀಯತೆ ಮೆರೆದರು. ಇದು ಕ್ಯಾಮೆರಾ ಮುಂದೆ ಮಾಡಿದ ರೀಲ್ ಅಲ್ಲ, ಬದುಕಿನಲ್ಲಿ ಪಾಲಿಸಿದ ಸಂಸ್ಕಾರ. ಆದರೆ ನೀವು ಸೋನಿಯಾ ಗಾಂಧಿಯವರನ್ನು ಜರ್ಸಿ ಹಸು ಎಂದು ಕರೆದಾಗ, ಸಂಸತ್ತಿನಲ್ಲಿ ರೇಣುಕಾ ಚೌಧರಿಯವರ ನಗುವನ್ನು ಶೂರ್ಪನಖಿಗೆ ಹೋಲಿಸಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಸುನಂದಾ ಪುಷ್ಕರ್ ಅವರನ್ನು 50 ಕೋಟಿಯ ಗರ್ಲ್ಫ್ರೆಂಡ್ ಎಂದು ಹೀಯಾಳಿಸಿದಾಗ ನಿಮಗೆ ಮಹಿಳಾ ಮರ್ಯಾದೆಯ ನೆನಪಾಗಲಿಲ್ಲವೇ? ನಿಮ್ಮ ಅಂಧಭಕ್ತರು ವಿರೋಧ ಪಕ್ಷದ ನಾಯಕಿಯರ ಚಿತ್ರಗಳನ್ನು ಮಾರ್ಫ್ ಮಾಡಿ ವಿಕೃತಿ ಮೆರೆದಾಗ ನೀವು ಏಕೆ ಮೌನವಾಗಿದ್ದಿರಿ ಎಂದು ಹರಿಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕೀಯ ಲಾಭಕ್ಕೆ ತಾಯಿಯ ಬಳಕೆ
ನೋಟು ಅಮಾನ್ಯೀಕರಣದ ಸಮಯದಲ್ಲಿ ನಿಮ್ಮ ವಯೋವೃದ್ಧ ತಾಯಿಯನ್ನು ಬ್ಯಾಂಕ್ ಸಾಲಿನಲ್ಲಿ ನಿಲ್ಲಿಸಿ ಪ್ರಚಾರ ಗಿಟ್ಟಿಸಿಕೊಂಡಿರಿ. ಈಗ ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ಆಕ್ರೋಶದಿಂದ ಜನರ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನು ಭಾವನಾತ್ಮಕ ಗುರಾಣಿಯಾಗಿ ಬಳಸುತ್ತಿದ್ದೀರಿ. ತಾಯಿಯ ಮೇಲಿನ ಪ್ರೀತಿ ಪವಿತ್ರವಾಗಿರಬೇಕು, ಅದನ್ನು ಮತಗಳ ಮೈಲೇಜ್ಗಾಗಿ ಬಳಸುವುದು ಅತ್ಯಂತ ನಿರ್ದಯವಾದ ರಾಜಕೀಯ ವ್ಯಾಪಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಕ್ಷಮೆಯ ಅರ್ಹತೆಯಿಲ್ಲ. ಮೊದಲು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ನಿಲ್ಲಿಸಿ, ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಿರಿ. ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದು ಕ್ಷಮೆಯಲ್ಲ, ಅಧಿಕಾರದ ಕ್ರೌರ್ಯ ನಿಲ್ಲಿಸುವುದೇ ನಿಜವಾದ ಕ್ಷಮೆ. ನಿಮ್ಮ ಈ ನಾಟಕೀಯ ನಡೆಯನ್ನು ದೇಶದ ಯುವಜನತೆ ಮತ್ತು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದ್ದಾರೆ.








