ಬೆಂಗಳೂರು: ಇಂದು ನಡೆಯಲಿರುವ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸರ್ಕಾರ ಮುಂದಾಗಿದ್ದು, ಪರೀಕ್ಷಾರ್ಥಿಗಳಿಗೆ ಕಠಿಣ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಈ ಹಿಂದಿನ ಗೊಂದಲಗಳಿಗೆ ತೆರೆ ಎಳೆದಿದೆ.
ಪರೀಕ್ಷೆ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆ, ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಧಾರ್ಮಿಕ ಉಡುಪುಗಳ ಗೊಂದಲಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಪರೀಕ್ಷಾರ್ಥಿಗಳು ಯಾವ ಬಟ್ಟೆಗಳನ್ನು ಧರಿಸಬೇಕು ಮತ್ತು ಯಾವುದನ್ನು ಧರಿಸಬಾರದು ಎಂಬ ಬಗ್ಗೆ ಪ್ರವೇಶ ಪತ್ರದಲ್ಲೇ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದರಿಂದ ಪರೀಕ್ಷಾ ಕೇಂದ್ರಗಳ ಬಳಿ ಕೊನೆ ಕ್ಷಣದಲ್ಲಿ ಯಾವುದೇ ವಾಗ್ವಾದಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.
ಕಟ್ಟುನಿಟ್ಟಿನ ನಿಯಮಗಳು ಮತ್ತು ನಿಷೇಧಿತ ವಸ್ತುಗಳು:
1. ಹಿಜಾಬ್, ಟೋಪಿ, ಸ್ಕಾರ್ಫ್ ಸೇರಿದಂತೆ ತಲೆ ಮತ್ತು ಕಿವಿ ಮುಚ್ಚುವ ಯಾವುದೇ ಬಟ್ಟೆಗಳಿಗೆ ಅವಕಾಶವಿಲ್ಲ.
2. ಶೂ ಹಾಕುವಂತಿಲ್ಲ, ಸರಳವಾದ ಚಪ್ಪಲಿಗಳನ್ನು ಮಾತ್ರ ಧರಿಸಬೇಕು.
3. ಅತಿಯಾದ ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸುವುದನ್ನು ನಿಷೇಧಿಸಲಾಗಿದೆ.
4. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್, ಪೆನ್ಸಿಲ್ ಬಾಕ್ಸ್, ನೀರಿನ ಬಾಟಲಿ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ.
5. ವಿಶೇಷವೆಂದರೆ, ಪರೀಕ್ಷಾ ಮೇಲ್ವಿಚಾರಕರು ಮತ್ತು ಸಿಬ್ಬಂದಿಗೂ ಸಹ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಲು ಅನುಮತಿ ಇಲ್ಲ.
ಧಾರ್ಮಿಕ ಆಭರಣಗಳ ಬಗ್ಗೆ ಸಡಿಲಿಕೆ
ಕಳೆದ ಬಾರಿ ನಡೆದ ಕೆಇಎ ಪರೀಕ್ಷೆಯಲ್ಲಿ ಜನಿವಾರ ಮತ್ತು ಮಂಗಳಸೂತ್ರದ ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಇದನ್ನು ಮನಗಂಡಿರುವ ಸರ್ಕಾರ, ಈ ಬಾರಿ ಮುನ್ನೆಚ್ಚರಿಕೆ ವಹಿಸಿದೆ. ಪರೀಕ್ಷಾರ್ಥಿಗಳು ಧರಿಸುವ ಜನಿವಾರ, ಶಿವದಾರ, ಉಡುದಾರ, ಮಂಗಳಸೂತ್ರ, ಕಾಲುಂಗುರ ಅಥವಾ ಕೈಗೆ ಕಟ್ಟುವ ಧಾರ್ಮಿಕ ದಾರಗಳನ್ನು ತೆಗೆಸದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇವುಗಳ ತಪಾಸಣೆಗಾಗಿ ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಎರಡುವರೆ ಗಂಟೆ ಮುಂಚೆಯೇ ಹಾಜರಿರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್ ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದರೆ ಜೈಲು ಶಿಕ್ಷೆ
ಪರೀಕ್ಷಾ ಅಕ್ರಮಗಳನ್ನು ತಡೆಯಲು ಸರ್ಕಾರ ವಿಶೇಷ ನಿಗಾ ಇಟ್ಟಿದೆ. ಒಂದು ವೇಳೆ ಯಾರಾದರೂ ಸೋಶಿಯಲ್ ಮೀಡಿಯಾದಲ್ಲಿ ಪರೀಕ್ಷಾ ಪೇಪರ್ ಲೀಕ್ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರೆ ಅಥವಾ ದಾರಿ ತಪ್ಪಿಸುವ ಪೋಸ್ಟ್ ಹಾಕಿದರೆ ಅಂತಹವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಖಾಸಗಿ ತರಬೇತಿ ಕೇಂದ್ರಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.








