ಚಾಮರಾಜನಗರ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು ಮೂರ್ನಾಲ್ಕು ವರ್ಷದ ಗಂಡು ಚಿರತೆ ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಹಕ್ಕಲಪುರ ಗ್ರಾಮದಲ್ಲಿ ನಡೆದಿದೆ. ಹಕ್ಕಲಪುರ ಗ್ರಾಮದ ಸತೀಶ್ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನನ್ನು ಇರಿಸಲಾಗಿತ್ತು. ಆದರೆ, ಚಿರತೆ ಬೋನಿಗೆ ಬಿದ್ದಿದ್ದು, ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ಈ ಪ್ರದೇಶದಲ್ಲಿ ಚಿರತೆಯ ಉಪಟಳ ಹೆಚ್ಚಾಗಿತ್ತು. ಜಾನುವಾರು ಮತ್ತು ಮೇಕೆಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿತ್ತು. ಇದರಿಂದಾಗಿ ರೈತರು ಕಂಗಾಲಾಗಿದ್ದರು. ಸದ್ಯ ಚಿರತೆ ಬೋನಿಗೆ ಬಿದ್ದಿರುವುದು ರೈತರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.








